ಕೋಲ್ಕತ್ತ: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ರಿಷಬ್ ಪಂತ್ ಪಡೆ ಗೆಲುವನ್ನು ಸಾಧಿಸಿದೆ. ಕೊನೇ ಓವರ್ನಲ್ಲಿ ಲಖನೌ ತಂಡದ ಮುಕುಲ್ ಚೌಧುರಿ, ತಂಡಕ್ಕೆ ಗೆಲುವನ್ನು ತಂದು ಕೊಟ್ಟಿದ್ದಾರೆ. ಆ ಮೂಲಕ, ಐಪಿಎಲ್ 2026ರ ಆವೃತ್ತಿಯಲ್ಲಿ ಕೋಲ್ಕತ್ತ ತಂಡದ ಸೋಲಿನ ಸರಪಳಿ ಮುಂದುವರಿದಿದೆ.ಸಾಮಾನ್ಯವಾಗಿ, ಪಂದ್ಯ ಸೋತಾಗಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾನಾಯಕನ ಜೊತೆ ವಾಗ್ಯುದ್ದಕ್ಕೆ ಇಳಿದ ಹಲವಾರು ನಿದರ್ಶನಗಳು ಹಿಂದೆ ಇದ್ದವು. ಮುಕುಲ್ ಚೌಧುರಿ ಕ್ರೀಸಿಗೆ ಬರುವ ಮುನ್ನ, ಪಂದ್ಯ ಇನ್ನೇನು ಸೋತಾಯಿತು ಎಂದು ಎಲ್ಲರೂ ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದರು. ಆದರೆ, ಮುಕುಲ್ ಚೌಧುರಿ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟರು.ಟಾಸ್ ಗೆದ್ದ ಲಖನೌ ತಂಡದ ನಾಯಕ ರಿಷಬ್ ಪಂತ್, ಮೊದಲು ಬೌಲ್ ಮಾಡುವ ನಿರ್ಧಾರಕ್ಕೆ ಬಂದರು. ಕೋಲ್ಕತ್ತ ತಂಡ ಇಪ್ಪತ್ತು ಓವರ್ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 181 ರನ್ ಹೊಡೆಯಿತು. ತಂಡದ ಪರವಾಗಿ ನಾಯಕ ಅಜಿಂಕ್ಯ ರಹಾನೆ 41, ಅಂಗ್ಕೃಷ್ 45 ಮತ್ತು ರೋವ್ವನ್ ಪೊವೆಲ್ 39 ರನ್ ಹೊಡೆದರು. ಲಖನೌ ತಂಡದ ಪರವಾಗಿ, ಆವೇಶ್ ಖಾನ್, ದಿಗ್ವೇಶ್ ರಾಥಿ, ಸಿದ್ದಾರ್ಥ್ ಮತ್ತು ಪ್ರಿನ್ಸ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಕೋಲ್ಕತ್ತ ನೈಟ್ ರೈಡರ್ಸ್, ಐಪಿಎಲ್ 15ನೇ ಪಂದ್ಯದಲ್ಲಿ ಲಖನೌ ವಿರುದ್ಧ ಪೈಪೋಟಿ ಮೊತ್ತ ಕಲೆಹಾಕಿತು.ಕೊನೆಯ ಎರಡು ಓವರ್ನಲ್ಲಿ ಲಖನೌ ತಂಡಕ್ಕೆ ಮೂವತ್ತು ರನ್ ಬೇಕಿತ್ತು. ಕ್ಯಾಮರೂನ್ ಗ್ರೀನ್ ಎಸೆದ ಹತ್ತೊಂಬತ್ತನೇ ಓವರ್ನಲ್ಲಿ ಮುಕುಲ್ ಚೌಧುರಿ ಹದಿನಾರು ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ ತಂಡಕ್ಕೆ ಹದಿನಾಲ್ಕು ರನ್ ಬೇಕಿತ್ತು. ವೈಭವ್ ಎಸೆದ ಕೊನೆಯ ಓವರ್ನಲ್ಲಿ ಎರಡು ಸಿಕ್ಸರ್ ಅನ್ನು ಹೊಡೆಯುವ ಮೂಲಕ, ಮುಕುಲ್, ತಂಡಕ್ಕೆ ಗೆಲುವನ್ನು ತಂದು ಕೊಟ್ಟರು. ಮುಕುಲ್ ಚೌಧುರಿ ಅಭಿನಂದಿಸಿದ ಸಂಜೀವ್ ಗೋಯೆಂಕಾಪಂದ್ಯವನ್ನು ತಮ್ಮ ತಂಡ ಗೆದ್ದ ಕೂಡಲೇ ಮೈದಾನಕ್ಕೆ ಆಗಮಿಸಿದ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮುಕುಲ್ ಚೌಧುರಿ ಬಳಿ ಬಂದು ಬೆನ್ನು ತಟ್ಟಿ ಮಾತನಾಡಿದರು. ಅವರ ತಲೆಯನ್ನು ಸವರಿ, ಅಭಿನಂದಿಸಿದರು. ಕೋಚ್ ಜೊತೆಯಾಗಿ ಬಂದ ಗೋಯೆಂಕಾ, ತುಂಬಾ ಹೊತ್ತು ಚೌಧುರಿ ಜೊತೆ ಮಾತುಕತೆ ನಡೆಸಿದರು. ಈ ಗೆಲುವಿನಿಂದ ಲಖನೌ ತಂಡ, ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಒಂದೂ ಪಂದ್ಯವನ್ನು ಗೆಲ್ಲದ ಕೋಲ್ಕತ್ತ, ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ನಂತರ ಅಂಕ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಥಾನ ಪಡೆದಿದೆ.



