ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಗೆ ನಗರ ಸ್ವಚ್ಛತೆಗಿಂತ ಕೆಲಸ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವುದು ಮುಖ್ಯವಾಗಿದೆ ಎನಿಸುತ್ತಿದೆ. ಈ ಪ್ರಶ್ನೆ ಎದುರಾಗಲು ಕಾರಣ ಪ್ರಸ್ತುತ ಮಳೆಗಾಲ ಆರಂಭವಾಗಿ, ಚಂಡಮಾರುತ ಆತಂಕ ಎದುರಾಗಿದ್ದರೂ ನಗರಸಭೆ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ.
ಚರಂಡಿಗಳ ಸ್ವಚ್ಛತೆ ಹೆಸರಿನಲ್ಲಿ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆದು ಮೇಲೆ ಹಾಕಿರುವ ನಗರಸಭೆ ಅದನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಇದರಿಂದ ಮೇಲೆ ಹಾಕಿದ ತ್ಯಾಜ್ಯ ಮತ್ತೆ ಚರಂಡಿ ಸೇರುತ್ತಿದೆ. ಇದರಿಂದ ನಗರಸಭೆ ಹೂಳು ಎತ್ತಿಯೂ ಉಪಯೋಗ ಇಲ್ಲವಾಗಿದೆ.ಮಳೆಗಾಲ ಆರಂಭವಾಗಿದ್ದು, ಚಂಡಮಾರುತ ಆತಂಕ ಎದುರಾಗಿದೆ. ಈಗ ಮಳೆ ಬಂದರೆ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದುಹೋಗದೆ ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಲಿದೆ. ಮೊನ್ನೆ ಬಿದ್ದ ಅಲ್ಪ ಮಳೆಗೆ ಕೆಲ ವಾರ್ಡುಗಳ ತಗ್ಗು ಪ್ರದೇಶಗಳ ಮನೆಗಳಿಗೆ ಮತ್ತು ಸಂಪುಗಳಿಗೆ ಚರಂಡಿ ನೀರು ನುಗ್ಗಿ, ಅವರು ಸ್ವಂತ ಖರ್ಚಿನಲ್ಲಿ ಸ್ವಚ್ಛ ಮಾಡಿಕೊಂಡಿದ್ದಾರೆ.
ಈಗಲೂ ಜೋರು ಮಳೆ ಬಂದರೆ ಬಹುತೇಕ ಎಲ್ಲ ವಾರ್ಡುಗಳಲ್ಲಿಯೂ ಪರಿಸ್ಥಿತಿ ಅದೇ ಆಗಲಿದೆ. ಹಾಗಾಗಿ ಪ್ರಸ್ತುತ ನಗರಸಭೆ ಸಮರೋಪಾದಿಯಲ್ಲಿ ಕೆಲಸ ಮಾಡದೆ ನಾಗರಿಕರ ಹಿತ ಕಾಪಾಡಲು ಸಾಧ್ಯವಿಲ್ಲ ಎಂಬುದನ್ನು ನಗರಸಭೆ ಅಧಿಕಾರಿಗಳು ಅರಿಯಬೇಕಿದೆ.ಈಗಾಗಲೇ ಚರಂಡಿಗಳಿಂದ ತೆಗೆದು ಮೇಲೆ ಹಾಕಿರುವ ತ್ಯಾಜ್ಯವನ್ನು ತುರ್ತಾಗಿ ವಿಲೇವಾರಿ ಮಾಡಬೇಕು.
ಇನ್ನೂ ಸ್ವಚ್ಛ ಮಾಡದ ಚರಂಡಿಗಳನ್ನು ಕೂಡಲೇ ಸ್ವಚ್ಛ ಮಾಡಬೇಕು. ಆ ಮೂಲಕ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡದಿದ್ದರೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದು ಕಟ್ಟಿಟ್ಟ ಬುತ್ತಿ. ಜೊತೆಗೆ ನಗರದ ಹಲವು ವಾರ್ಡುಗಳಲ್ಲಿ ಕಸ ಸಮರ್ಪಕವಾಗಿ ವಿಲೇವಾರಿಯಾಗದೆ ಕಸದ ರಾಶಿಗಳು ತುಂಬಿಕೊಂಡಿವೆ.
ಆ ಕಸದ ರಾಶಿ ವಿಲೇ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಸೂಚನೆ ನೀಡಿ, ವಾರ್ಡುಗಳಲ್ಲಿ ಉಳಿದಿರುವ ಕಸದ ರಾಶಿಗಳನ್ನು ಕೂಡಲೇ ವಿಲೇವಾರಿ ಮಾಡಿಸಲು ಮುಂದಾಗಬೇಕು. ಇಲ್ಲವಾದರೆ ಮಳೆಗಾಲದಲ್ಲಿ ಸಹಜವಾಗಿಯೇ ಹರಡುವ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ನಗರಸಭೆಯೇ ನೇರಹೊಣೆಯಾಗಲಿದೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು.
ಈ ಸಮಸ್ಯೆಗಳ ಬಗ್ಗೆ ನಗರಸಭೆ ಕೂಡಲೇ ಗಮನ ಹರಿಸದಿದ್ದರೆ ಮುಂದೆ ಮಳೆ ಬಂದು ಎದುರಾಗಲಿರುವ ಎಲ್ಲ ಸಮಸ್ಯೆಗಳಿಗೂ ನಗರಸಭೆಯೇ ನೇರಹೊಣೆಯಾಗಲಿದೆ ಎಂದು ಹೇಳಬಯಸುತ್ತೇನೆ. ಹಾಗಾಗಿ ಕೂಡಲೇ ಸಮರೋಪಾದಿಯಲ್ಲಿ ನಗರದ ಚರಂಡಿಗಳ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ಅಧಿಕಾರಿಗಳು ಗಮನ ಹರಿಸಬೇಕೆದೆ.