ಬೇಲೂರು: ವೈದ್ಯರು ಹೇಗೆ ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೋ ಹಾಗೇಯೇ ಪೌರ ಕಾರ್ಮಿಕರು ಸಹ ಪಟ್ಟಣದ ನಾಗರೀಕರ ಆರೋಗ್ಯ ಕಾಪಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೆಳಿದರು.
ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೌರ ಕಾರ್ಮಿಕರಿಗೆ ವಿವಿಧ ಪರಿಕರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ಪೌರ ಕಾರ್ಮಿಕರು ಮಳೆ, ಚಳಿ, ಬಿಸಿಲೆನ್ನದೆ ತಮ್ಮ ಜೀವದ ಹಂಗನ್ನು ತೊರೆದು ಹಬ್ಬ ಹರಿ ದಿನಗಳೆನ್ನದೆ ವರ್ಷದ ಎಲ್ಲ ದಿನಗಳಲ್ಲೂ ಪಟ್ಟಣದ ಜನರನ್ನು ಆರೋಗ್ಯವಾಗಿಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಾರೆ.
ಆದ್ದರಿಂದ ನಾವು ಅವರ ಆರೋಗ್ಯ ಕಾಪಾಡುವುದಕ್ಕಾಗಿ ಪುರಸಭೆಯಿಂದ 2022-2023ನೇ ಸಾಲಿಗೆ ಪೌರ ಕಾರ್ಮಿಕರು ಮತ್ತು ನೀರು ಸರಭರಾಜು ನೌಕರರಿಗೆ ಕೈ ಗವಸು, ಜರ್ಕಿ ಮತ್ತು ಶೂ, ಗಳನ್ನು ವಿತರಿಸುತಿದ್ದೇವೆ. ಇವುಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಡುವುದಲ್ಲ. ನೀವುಗಳು ಕೆಲಸಕ್ಕೆ ಹೊರಟ ಸಂದರ್ಭ ಇವುಗಳನ್ನು ಬಳಕೆ ಮಾಡಿಕೊಂಡು ನಿಮ್ಮಗಳ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು.
ಜತೆಗೆ ಸಿಬ್ಬಂದಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಪೌರ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು. ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ಕೊಡುವುದಕ್ಕೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗುವುದು ಎಂದರು.
ಪುರಸಭೆ ಸದಸ್ಯ ಬಿ.ಗಿರಿಶ್ ಮಾತನಾಡಿ, ನಗರದ ಜನತೆಯ ಆರೋಗ್ಯ ರಕ್ಷಿಸುವಲ್ಲಿ ನಮ್ಮ ಪೌರ ಕಾರ್ಮಿಕರ ಪಾತ್ರ ಮಹತ್ತರದ್ದಾಗಿದೆ. ಅವರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ತೊಂದರೆಗೂ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಮಿಕರಿಗೆ ವಿವಿಧ ಪರಿಕರಗಳನ್ನು ವಿತರಿಸುತಿದ್ದೇವೆ. ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಹ ಕೊಡಲು ಮುಂದಾಗಲಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ಜಮಾಲೂದ್ದೀನ್, ಪ್ರಬಾಕರ್, ಮೀನಾಕ್ಷಿ, ಶ್ರೀನಿವಾಸ್, ಅಕ್ರಂಷರೀಫ್, ಫಯಾಜ್, ಆರೋಗ್ಯಾಧಿಕಾರಿ ಲೋಹಿತ್ ಸೇರಿದಂತೆ ಇತರರಿದ್ದರು.