ಹೊಸದಿಲ್ಲಿ: ಅಮೆರಿಕದ ಶುಲಾ ವಿಸ್ಟಾದಲ್ಲಿ ನಡೆಯುತ್ತಿರುವ ಎಂವಿಎ ಹೈ ಪರ್ಫಾರ್ಮೆನ್ಸ್ ಆಯತ್ಲೆಟಿಕ್ಸ್ ಮೀಟ್-1ರಲ್ಲಿ ಭಾರತದ ಲಾಂಗ್‍ಜಂಪರ್ ಮುರಳಿ ಶ್ರೀಶಂಕರ್ ಚಿನ್ನದ ಪದಕ ಜಯಿಸಿದ್ದಾರೆ. ಅವರು 8.29 ಮೀ. ಸಾಧನೆಗೈದರು.
2022ರ ಕಾಮನ್ವೆಲ್ತ್ ಗೇಮ್ಸ್‍ನಲ್ಲಿ 8.36 ದೂರದ ನೆಗೆತದೊಂದಿಗೆ ಬೆಳ್ಳಿ ಪದಕ ಜಯಿಸಿದ್ದ 24 ವರ್ಷದ ಮುರಳಿ ಶ್ರೀಶಂಕರ್, ಇಲ್ಲಿ ಇದನ್ನು 0.07 ಮೀ.ಗಳಿಂದ ಹಿಂದುಳಿದರು. ಚೀನದ ಮಾ ವೀಡಾಂಗ್ ಬೆಳ್ಳಿ (7.99 ಮೀ.) ಮತ್ತು ಹುವಾಫೆಂಗ್ ಹುವಾಂಗ್ ಕಂಚು (7.61 ಮೀ.) ಜಯಿಸಿದರು.
ಎಪ್ರಿಲ್ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರ್ಯಾನ್‍ಪ್ರಿ ಕೂಟದಲ್ಲಿ ಮುರಳಿ ಶ್ರೀಶಂಕರ್ 7.94 ಮೀ. ದೂರ ನೆಗೆದಿದ್ದರು. ಪುರುಷರ ವಿಭಾಗದಲ್ಲಿ ಭಾರತದ ಲಾಂಗ್‍ಜಂಪ್ ರಾಷ್ಟ್ರೀಯ ದಾಖಲೆ ಸ್ವಲ್ಪ ಕಾಲ ಇವರದೇ ಹೆಸರಲ್ಲಿತ್ತು (8.36 ಮೀ.). ಬಳಿಕ ಇದನ್ನು ಜೆಸ್ವಿನ್ ಅಲ್ಡಿನ್ ಉತ್ತಮಪಡಿಸಿದರು (8.42 ಮೀ.)
Leave a Review