ಕೆ.ಆರ್.ನಗರ: ಹುತಾತ್ಮ ಯೋಧರನ್ನು ಗೌರವಿಸುವ ನಿಟ್ಟಿನಲ್ಲಿ ದೇಶಾದ್ಯಂತ `ಮೇರಿ ಮಾಟಿ ಮೇರಾ ದೇಶ್’ (ನನ್ನ ಮಣ್ಣು, ನನ್ನ ದೇಶ) ಎಂಬ ಅಭಿಯಾನ ನಡೆಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವುದು ದೇಶದ ಏಕತೆ ಸಂಕೇತವಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಹೇಳಿದರು.
ಪಟ್ಟಣದ ತೋಪಮ್ಮನ ದೇವಸ್ಥಾನದ ಆವರಣದಲ್ಲಿ ಕೆ.ಆರ್.ನಗರ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಹುತಾತ್ಮರ ಸ್ಮರಣಾರ್ಥವಾಗಿ ಮೇರಿ ಮಾಟಿ ಮೇರಾ ದೇಶ್ ಎಂಬ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
ಅದರಂತೆ, ದೇಶದ ಮೂಲೆ ಮೂಲೆಗಳಿಂದಲೂ ಮೃತ್ತಿಕೆ ಸಂಗ್ರಹಿಸಲಾಗಿದೆ ಎಂದ ಅವರು ನನ್ನ ಮಣ್ಣು ನನ್ನ ದೇಶದ ಅಭಿಯಾನ ಅಡಿಯಲ್ಲಿ ಪ್ರತಿಗ್ರಾಮಗಳಲ್ಲೂ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದರು
ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲೇ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು `ಅಮೃತ್ ಉದ್ಯಾನ’ ನಿರ್ಮಿಸಲಾಗುವುದು. ಈ ಉದ್ಯಾನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ದೇಶಾದ್ಯಂತ ವಿನೂತನ ಅಭಿಯಾನವನ್ನು ಕೈಗೊಂಡಿದ್ದು, ನನ್ನ ಮಣ್ಣು ನನ್ನ ದೇಶ ಎಂಬ ಪರಿಕಲ್ಪನೆಯಲ್ಲಿ ದೇಶಾದ್ಯಂತ ದೇಶವಾಸಿಗಳು ಸಂಗ್ರಹಿಸಿ ನೀಡುವ ಮಣ್ಣಿನಲ್ಲಿ ದೆಹಲಿಯಲ್ಲಿ ಅಮೃತ ವಾಟಿಕಾ(ಅಮೃತ ವನ) ವನ್ನು ನಿರ್ಮಿಸುವುದು ಕೇಂದ್ರ ಸರಕಾರದ ಯೋಜನೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗುವ ಭವ್ಯ ವನದಲ್ಲಿ ದೇಶದ ಪ್ರತಿಯೊಬ್ಬನ ಪಾಲೂ ಇರಬೇಕು ಮತ್ತು ಇದು ದೇಶವಾಸಿಗಳಿಗೆ ಅಭಿಮಾನದ ಸಂಕೇತವೂ ಹೌದು ಎಂಬ ಕಲ್ಪನೆಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಇಡೀ ದೇಶ ಒಂದು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಸಶಕ್ತ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂಬುದು ಮೋದಿಯವರ ಆಶಯವಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ಕೆ ವೈ ಮಂಜು, ಜಿಲ್ಲಾ ಕಾರ್ಯದರ್ಶಿ ಸ್ವಪ್ನಾ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಕಾಶ್, ನಟರಾಜ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಿಲಕ್, ಒಬಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ದ್ರಾಕ್ಷಯಿಣಿ, ನಗರ ಪ್ರಧಾನ ಕಾರ್ಯದರ್ಶಿ ಕೆ ಆರ್ ಮಂಜು, ಎಸ್ ಸಿ ಮೋರ್ಚಾ ಅಧ್ಯಕ್ಷ ಮದುಚಂದ್ರ, ಮುಖಂಡರಾದ ಜಗದೀಶ್, ಶಿವಪ್ರಸಾದ್, ರಾಜಣ್ಣ, ಯೋಗೇಶ್, ಗಿರೀಶ್, ತಮ್ಮಣ್ಣೆಗೌಡ ಮುಂತಾದವರು ಉಪಸ್ಥಿತರಿದ್ದರು.