ನೆಲಮಂಗಲ: “ಜನಪದ ರಂಗಭೂಮಿ, ಅರಮನೆ ರಂಗಭೂಮಿ ಮತ್ತು ವೃತ್ತಿನಿರತ ರಂಗ ಭೂಮಿಯ ಮೂಲಕ ಸಮೃದ್ಧವಾಗಿದ್ದ ಕರ್ನಾಟಕದ ರಂಗಭೂಮಿ ವಲಯ ಇತ್ತೀಚಿನ ವರ್ಷಗಳಲ್ಲಿ ಸೊರಗುತ್ತಿದೆ. ಅದರ ಪುನಶ್ಚೇತನಕ್ಕಾಗಿ ಸರ್ಕಾರ ಕೂಡಲೇ ಕ್ರಮಕೈ ಗೊಳ್ಳಬೇಕು. ಕಳೆದ 28 ವರ್ಷಗಳಿಂದ ರಂಗಭೂಮಿ ವಲಯದಲ್ಲಿ ತೊಡಗಿಸಿಕೊಂಡಿರುವ ರಂಗ ಶಿಕ್ಷಣ ಕೇಂದ್ರದಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು” ಎಂದು ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ಅಭಿಪ್ರಾಯ ಪಟ್ಟರು.
ಅವರು ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ರಂಗ ಶಿಕ್ಷಣ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ತಿಕ ರಂಗ ಸಂಭ್ರಮ-2023 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಜನಪದ ರಂಗಭೂಮಿ ಬೆಳೆದು ಬಂದ ಹಾದಿ, ಮೈಸೂರು ಮಹಾರಾಜರು ರಂಗಭೂಮಿಯ ಬೆಳವಣಿಗೆಗೆ ನೀಡಿದ ಕಾಣಿಕೆ, ವೃತ್ತಿನಿರತ ರಂಗ ಭೂಮಿಯ ಉದಯ ಮತ್ತು ಬೆಳವಣಿಗೆ, ವರದಾ ಚಾರ್ಯರು, ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ, ಹೊನ್ನಪ್ಪ ಭಾಗವತರ್, ಚಂದೂಡಿ ಲೀಲಾ ಮುಂತಾದವರು ಕನ್ನಡ ರಂಗಭೂಮಿಗೆ ನೀಡಿದ ಕಾಣಿಕೆಯನ್ನು ಸ್ಮರಿ ಸುತ್ತಾ, ಹವ್ಯಾಸಿ ರಂಗಭೂಮಿ ಮತ್ತು ಬೀದಿ ನಾಟಕಗಳ ಪಾತ್ರವನ್ನು ಶ್ಲಾಘಿಸುತ್ತ,
ಆಧುನಿಕ ಕಾಲಘಟ್ಟದಲ್ಲಿ ಹೆಗ್ಗೋಡಿನ ನೀನಾಸಂ ಮತ್ತು ಮೈಸೂರಿನ ರಂಗಾಯಣದ ಕಾರ್ಯವನ್ನು ನೆನೆಯುತ್ತಾ, ಇಂದಿನ ರಂಗಭೂಮಿ ಸೊರಗುತ್ತಿರುವ ವಿಚಾರವನ್ನು ಅತ್ಯಂತ ಮನಮುಟ್ಟುವಂತೆ ವಿವರಿಸಿದರು. “ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು, ಸರ್ಕಾರ ಮಾಡಬೇಕಾದ ಕಾರ್ಯವನ್ನು ರಂಗ ಶಿಕ್ಷಣ ಕೇಂದ್ರ ಮಾಡುತ್ತಿದೆ. ಅದಕ್ಕಾಗಿ ಅದರ ಸಂಸ್ಥಾಪಕರಾದ ಶ್ರೀಯುತ ಸಿದ್ದ ರಾಜು ಮತ್ತು ಮಂಜುಳಾ ಸಿದ್ದರಾಜು ದಂಪತಿಗಳನ್ನು ಅಭಿನಂದಿಸುತ್ತೇನೆ.
ರಂಗ ಶಿಕ್ಷಣ ಕೇಂದ್ರದ ಮೂಲಕ ರಂಗಭೂಮಿಯ ಚಟುವಟಿಕೆಗಳನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಖ್ಯಾತಿ ಈ ದಂಪತಿಗಳದ್ದು” ಎಂದು ತಿಳಿಸಿದರು.ಪ್ರಾಧ್ಯಾಪಕ ಮತ್ತು ಚಿಂತಕ ಡಾ. ಗಂಗರಾಜು ಮಾತನಾಡಿ “ಮಹಾಭಾರತದ ಎರಡು ಪಾತ್ರಗಳಾದ ಭೀಷ್ಮ ಮತ್ತು ದೃತರಾಷ್ಟ್ರರ ಪಾತ್ರಗಳನ್ನು ನಾಟಕದಲ್ಲಿ ಯಾರು ಮಾಡಲು ಒಪ್ಪುವುದಿಲ್ಲ. ಆದರೆ ನನ್ನ ಪ್ರಕಾರ ಅವೆರಡು ಬಹಳ ಮುಖ್ಯವಾದ ಪಾತ್ರಗಳು. ಕಣ್ಣಿಲ್ಲದಿದ್ದರೂ ಮಹಾಭಾರತದ ಎಲ್ಲಾ ಘಟನೆಗಳಿಗೆ ಸಾಕ್ಷಿಯಾದ ದೃತರಾಷ್ಟ್ರ ಮತ್ತು ಕಣ್ಣಿನಿಂದ ಸಂಪೂರ್ಣ ಮಹಾಭಾರತವನ್ನು ಕಂಡ ಭೀಷ್ಮರ ಪಾತ್ರಗಳು ನಿರಕ್ಕೂ ಬೆರಗು ಹುಟ್ಟಿಸುವಂತಹ ಪಾತ್ರಗಳು” ಎಂದರು.
ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ರಂಗ ಶಿಕ್ಷಣ ಕೇಂದ್ರ ಬೆಳೆದು ಬಂದ ಹಾದಿ ಮತ್ತು ಸಾಧನೆಯನ್ನು ವಿವರಿಸಿದರು. ದೇಶದ ನಾನಾ ಭಾಗದಲ್ಲಿ ರಂಗ ಶಿಕ್ಷಣ ಕೇಂದ್ರದ ಕಲಾವಿದರು ನಾಟಕ ಪ್ರದರ್ಶನ ಮಾಡಿರುವ ವಿಚಾರವನ್ನು ಹಂಚಿಕೊಂಡರು.
ಲಯನ್ ಪ್ರಕಾಶ್ ಅವರು ಮಾತನಾಡಿ ರಂಗ ಶಿಕ್ಷಣ ಕೇಂದ್ರ ಆರಂಭವಾದ ದಿನಗಳ ಮೆಲುಕು ಹಾಕಿದರು. ರಂಗ ಶಿಕ್ಷಣ ಕೇಂದ್ರದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿರುತ್ತವೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು. ಕಾದಂಬರಿಕಾರ ಮುರುಳಿಧರ್ ಮಾತನಾಡಿ ವಿಶಿಷ್ಟ ಸೇವೆಯಲ್ಲಿ ತೊಡಗಿರುವ ರಂಗ ಶಿಕ್ಷಣ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದರು.
ಕನಕದಾಸರ ಕಾವ್ಯದಾರಿತ “ರಾಘವನ ರಾಗಿ” ಎಂಬ ನಾಟಕವನ್ನು ರಂಗ ಶಿಕ್ಷಣ ಕೇಂದ್ರದ ಕಲಾವಿದರು ಪ್ರದರ್ಶಿಸಿದರು. ಡಾ. ಎಂ ಪುಷ್ಪಲತಾ ಅವರು ನಾಟಕವನ್ನು ರಂಗರೂಪಕ್ಕೆ ಪರಿವರ್ತಿಸಿದರೆ, ವಿ ದೇವರಾಜ್ ರವರು ನಾಟಕವನ್ನು ನಿರ್ದೇಶಿಸಿದ್ದರು . ಬೂದಿಹಾಳ್ ಕಿಟ್ಟಿ, ಶ್ರೀನಿವಾಸ್, ದಿನೇಶ್, ಪ್ರವೀಣ್, ಕೀರ್ತನ್, ಹರ್ಷ, ದಶರಥ, ಮನು, ಮುನಿರಾಜು, ಕಿರಣ್, ದೊಡ್ಡ ರಾಮೇಗೌಡರು, ನಯನ, ಭವ್ಯ, ಅನುಷಾ, ನಿಖಿತಾ, ಅಮೃತ, ಗೀತಾ, ಸಾಗರ್, ಶಾಲಿನಿ, ಗೀತಾ, ಸಾಗರ್ ಮತ್ತು ಶಾಲಿನಿ ನಾಟಕದ ವಿವಿಧ ಪಾತ್ರಗಳಲ್ಲಿ ಕಲಾವಿದರಾಗಿ ನಟಿಸಿ ನೋಡುಗರ ಮನರಂಜಿಸಿದರು. ಕಾರ್ಯಕ್ರಮದಲ್ಲಿ ರಂಗ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ತಾಲೂಕು ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್, ಡಾ. ಬೋಗಣ್ಣ, ಶಿಕ್ಷಕರಾದ ಪ್ರಕಾಶ್, ಕಲಾವಿದರಾದ ಕೃಷ್ಣಯ್ಯ, ಕವಿ ಆನಂದ ಮೌರ್ಯ, ಅಶೋಕಪ್ಪ ಮುಂತಾದವರು ಉಪಸ್ಥಿತರಿದ್ದರು.