ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಎಎಸ್ ಅಧಿಕಾರಿ ಕುಸುಮಾಕುಮಾರಿ ರವರ ಸಹಿ ಸೇರಿದಂತೆ ಅಲ್ಲಿನ ಸಿಬ್ಬಂದಿಗಳು ಚಲನ್. ಬ್ಯಾಂಕ್ ಸೀಲ್ ಎಲ್ಲವೂ ನಕಲಿ ಮಾಡಿ ಕೊಟ್ಯಾಂತರ ಹಣ ಲೂಟಿ ಮಾಡಿರುವ ಪ್ರಕರಣ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೈಸೂರು ತಾಲ್ಲೂಕು ಕುಪ್ಪಲೂರು 3ನೇ ಹಂತದ ವಸತಿ ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದ ಕಡತವೊಂದರಲ್ಲಿ ತಮ್ಮ ಸಹಿಯನ್ನು ನಕಲು ಮಾಡಿ, ಅನುಮೋದನೆ ನೀಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿಕಟ ಪೂರ್ವ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಎಸ್. ಕುಸುಮಾಕುಮಾರಿ, ಜಿಲ್ಲಾಧಿಕಾರಿಗಳೂ ಆದ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ.ರಾಜೇಂದ್ರ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ತಾವು ಈ ಹಿಂದೆ ಮುಡಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಆದೇಶದಂತೆ ಜಿ.ಡಿ.ಶೇಖರ್ ಅವರು ಈಗ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶ ಪ್ರಶ್ನಿಸಿ ನಾನು ನ್ಯಾಯಾಲಯದ ಮೊರೆ ಹೋಗಿದ್ದು, ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ತಮ್ಮ ದೂರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಮುಡಾ ನೌಕರರಾದ ಎಂ.ಎಸ್. ನಂದೀಶ್ ಹಾಗೂ ಗುರುದತ್ ಅವರು ‘ಡಿ’ ಗ್ರೂಪ್ ನೌಕರ ರವಿ ಎಂಬುವರನ್ನು. ನಾನು ವಾಸವಿರುವ ಮುಡಾ ಕ್ವಾರ್ಟರಸ್ ಗೆ ಕಳುಹಿಸಿ ಕಡತವೊಂದಕ್ಕೆ ಸಹಿ ಮಾಡುವಂತೆ ಆತನ ಮೂಲಕ ಕೇಳಿದ್ದರು. ಆ ಕಡತವು ವಲಯ-1ರ ಮಹದೇವ ನಾಯಕ ಎಂಬುವರದ್ದಾಗಿದ್ದು, ಕುಪ್ಪಲೂರು 3ನೇ ಹಂತದ ಬಡಾವಣೆ ಸರ್ವೆ ನಂಬರ್ 96, 96ಎ ಆಗಿತ್ತು. ಆದರೆ ಹಾಲಿ ಇರುವ ಕಾರ್ಯದರ್ಶಿ ಜಿ.ಡಿ. ಶೇಖರ ಅವರ ಸಹಿ ಪಡೆಯಬೇಕೆಂದು ಹೇಳಿ ನಾನು ಆ ಕಡತವನ್ನು ವಾಪಸ್ ಕಳುಹಿಸಿದ್ದೇನೆ ಎಂದು ಕುಸುಮಾಕುಮಾರಿ ದೂರಿನಲ್ಲಿ ತಿಳಿಸಿದ್ದಾರೆ.
ಕಡತವನ್ನು ನನ್ನ ಬಳಿ ತಂದಾಗ ಅದರ ಫೋಟೋ ತೆಗೆದುಕೊಂಡಿದ್ದೇನೆ. ಕಂಡಿಕೆ 87ರಲ್ಲಿ ಕಾರ್ಯದರ್ಶಿ ಸಹಿಗೆ ಬಾಕಿ ಇತ್ತು. ಆ ಜಾಗದಲ್ಲಿ ಜಿ.ಡಿ. ಶೇಖರ ಅವರ ಸಹಿ ಆಗಬೇಕಿತ್ತು, ಆದರೆ, ಅಲ್ಲಿ ನನ್ನ ಸಹಿ ಹೋಲುವಂತಹ ಸಹಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನನಗೆ ವಿಷಯ ತಿಳಿದ ತಕ್ಷಣವೇ ನಾನು ಪ್ರಾಧಿಕಾರದ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಿ, ಲಿಖಿತ ದೂರನ್ನೂ ಅಕ್ಟೋಬರ್ 5ರಂದು ನೀಡಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ. ನನ್ನ ಸಹಿ ಹೋಲುವಂತೆ ಬೇರೆ ಯಾರೋ ಕಡತದಲ್ಲಿ ಸಹಿ ಮಾಡಿದ್ದಾರೆ.
ಅವರ ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಆಯುಕ್ತರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿರುವ ಕುಸುಮಾಕುಮಾರಿ, ನಂದೀಶ ಹಾಗೂ ಗುರುದತ್ ಸಾಕ್ಷಿಯನ್ನು ನಾಶ ಮಾಡುವ ಸಂಭವವಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಕೋರಿಕೊಂಡಿದ್ದಾರೆ.
ಈ ಕಡತವು ಬದಲಿ ನಿವೇಶನ ಮಂಜೂರು ಮಾಡುವ ಸಂಬಂಧದ್ದಾಗಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಭಾರೀ ಗೋಲ್ಮಾಲ್ ನಡೆಸುವ ಸಲುವಾಗಿ ಮುಡಾ ಕಾರ್ಯದರ್ಶಿ ಅವರ ನಕಲಿ ಸಹಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಚಲನ್. ಬ್ಯಾಂಕ್ ಸೀಲ್ ನಕಲಿ ಮಾಡಿ ಕೊಟ್ಯಾಂತರ ಹಣ ಲೂಟಿ: ಮಾಜಿ ಕಾರ್ಯದರ್ಶಿ ಸಹಿ ನಕಲು ಮಾಡಿ ಬದಲಿ ನಿವೇಶನದ ಟೈಟಲ್ ಡೀಡ್ ಕಡತಕ್ಕೆ ಅನುಮೋದನೆ ಪಡೆದು ಭಾರಿ ಗೋಲ್ ಮಾಲ್ ಮಾಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಾಧಿಕಾರ (ಮುಡಾ)ದ ಚಲನ್ ಮತ್ತು ಬ್ಯಾಂಕ್ ಸೀಲ್ ಅನ್ನೇ ನಕಲು ಮಾಡಿಕೊಂಡು ಕೋಟ್ಯಾಂತರ ರೂ. ವಂಚಿಸಿರುವ ಮತ್ತೊಂದು ಮಹಾ ವಂಚನೆ ಬಯಲಾಗಿದೆ.
ಮುಡಾ ವ್ಯಾಪ್ತಿಯ ಖಾಸಗಿ ಬಡಾವಣೆಗಳ ಖಾತಾ ವರ್ಗಾವಣೆಗಾಗಿ ಬ್ಯಾಂಕ್ಗೆ ಹಣ ಪಾವತಿ ಮಾಡಿದ ಸಂಬಂಧ ನಕಲಿ ಚಲನ್ ಮತ್ತು ಸೀಲ್ನೊಂದಿಗೆ ಮುಡಾಗೆ ಅರ್ಜಿದಾರರು ಸಲ್ಲಿಸಿರುವುದು ಕಂಡು ಬಂದಿದ್ದು, ಈ ಸಂಬಂಧ ಮುಡಾದಿಂದ ಅರ್ಜಿದಾರರ ವಿರುದ್ಧ ಲಕ್ಷ್ಮೀಪುರಂ ಠಾಣೆಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಬಯಲಾಗುತ್ತಿದ್ದಂತೆಯೇ ಮುಡಾದ ಮೂವರು ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ.ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಮುಡಾ ಕಾರ್ಯದರ್ಶಿ ಜಿ.ಡಿ.ಶೇಖರ್ ಠಾಣೆ ಇನ್ಸ್ಪೆಕ್ಟರ್ಗೆ ಮನವಿ ಮಾಡಿದ್ದಾರೆ.