`ನಾಡಪ್ರಭು ಕೆಂಪೇಗೌಡ’ ಜೀವನ ಚರಿತ್ರೆ ಸಿನಿಮಾ ಮಾಡಲು ಎರಡು ತಂಡಗಳು ತುದಿಗಾಲಲ್ಲಿ ನಿಂತಿದ್ದವು. ಈ ಸಂಬಂಧ ಕೆಲವು ದಿನಗಳ ಹಿಂದಷ್ಟೇ ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಕೋರ್ಟ್ ಮೆಟ್ಟಿಲೇರಿ, ಕೆಂಪೇಗೌಡ ಸಿನಿಮಾಗೆ ಸಂಬಂಧಿಸಿದಂತೆ ತಡೆಯಾಜ್ಞೆಯನ್ನು ತೆಗೆದುಕೊಂಡು ಬಂದಿದ್ದರು.
ಈ ವಿವಾದದ ಮಧ್ಯೆನೇ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಕೆಂಪೇಗೌಡರ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಕೆಲವು ದಿನಗಳಿಂದ ಕೆಂಪೇಗೌಡರ ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿತ್ತು. ಆ ಮಾತು ಈಗ ನಿಜವಾಗಿದೆ. ನಾಗಾಭರಣ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ‘ನಾಡಪ್ರಭು ಕೆಂಪೇಗೌಡ’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ.
ನಟರಾಕ್ಷಸ ಡಾಲಿ ಧನಂಜಯ್ ‘ನಾಡಪ್ರಭು ಕೆಂಪೇಗೌಡ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ಕೇಳಿಬರುತ್ತಿದೆ. ಇದೊಂದು ಐತಿಹಾಸಿ ಸಿನಿಮಾ ಆಗಿರುವುದರಿಂದ ಸಾಕಷ್ಟು ಸಂಶೋಧನೆ ಬೇಕು. ಟಿ.ಎಸ್ ನಾಗಾಭರಣ ಕಳೆದ ಎರಡು ದಶಕಗಳಿಂದ ಕೆಂಪೇಗೌಡರ ಬಗ್ಗೆ ಸಂಶೋಧನೆ ಮಾಡಿ ಈಗ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ.
ಡಾಲಿ ಧನಂಜಯ್ ‘ನಾಡಪ್ರಭು ಕೆಂಪೇಗೌಡ’ ಸಿನಿಮಾದ ಫಸ್ಟ್ ಲುಕ್ ಅನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ಕುತೂಹಲಗಳಿಗೆ ಧನಂಜಯ್ ನಾಂದಿ ಹಾಡಿದ್ದಾರೆ. ‘ನಾಡಪ್ರಭು ಕೆಂಪೇಗೌಡ’ರ ಐತಿಹಾಸಿಕ ಅನಾವರಣ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ. ಒಟ್ನಲ್ಲಿ ‘ನಾಡಪ್ರಭು ಕೆಂಪೇಗೌಡ’ ಸಿನಿಮಾ ಮೂಲಕ ಸಿನಿಪ್ರಿಯರಿಗೆ ಕನ್ನಡದ ಮತ್ತೊಬ್ಬ ಮಹಾಪುರುಷನ ಕಥೆಯನ್ನು ಹೇಳುವುದಕ್ಕೆ ಸಜ್ಜಾಗುತ್ತಿದೆ.
‘ನಾಡಪ್ರಭು ಕೆಂಪೇಗೌಡ’ದಂತಹ ಐತಿಹಾಸಿಕ ಸಿನಿಮಾಗೆ ಟಿ ಎಸ್ ನಾಗಾಭರಣದಂತಹ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾಗೆ ನ್ಯಾಯ ಸಿಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಸುಮಾರು ಎರಡು ದಶಕಗಳಿಂದ ಕೆಂಪೇಗೌಡರ ಬಗ್ಗೆ ಸಂಶೋಧನೆ ಮಾಡಿ, ಕಥೆ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ. ಹೀಗಾಗಿ ಕೆಂಪೇಗೌಡರ ಚರಿತ್ರೆಯನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಗಾಭರಣ ಈಗಾಗಲೇ ‘ಬಂಗಾರದ ಜಿಂಕೆ’, ‘ಜನುಮದ ಜೋಡಿ’, ‘ಕಲ್ಲರಳಿ ಹೂವಾಗಿ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಹೀಗಾಗಿ ಎರಡು ದಶಕಗಳ ಕನಸಿನ ಕೂಸನ್ನು ತೆರೆಮೇಲೆ ತರುವುದಕ್ಕೆ ಹಲವು ವರ್ಷಗಳ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ನಾಗಾಭರಣ ನಿರ್ದೇಶನಕ್ಕೆ ಕಮ್ ಬ್ಯಾಕ್ ಮಾಡಿದ್ದು ಸಿನಿಪ್ರಿಯರಿಗೆ ಡಬಲ್ ಖುಷಿ ಕೊಟ್ಟಿದೆ. ಇನ್ನು ‘ನಾಡಪ್ರಭು ಕೆಂಪೇಗೌಡ’ ಧನಂಜಯ್ ಹಾಗೂ ನಾಗಾಭರಣ ಅವರ ಮೊದಲ ಕಾಂಬಿನೇಷನ್ ಏನಲ್ಲ. ಏಳು ವರ್ಷಗಳ ಹಿಂದೆ ‘ಅಲ್ಲಮ’ ಅನ್ನುವ ಸಿನಿಮಾದಲ್ಲಿ ಧನಂಜಯ್ ಹಾಗೂ ನಾಗಾಭರಣ ಒಟ್ಟಿಗೆ ಕೆಲಸ ಮಾಡಿದ್ದರು.