ಕನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್ಗಳು ಕಾಣಿಸಿಕೊಂಡಿವೆ.ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ.
ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ನಿರ್ದೇಶಕ ದಿನೇಶ್ ಬಾಬು.
50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ದಿನೇಶ್ ಬಾಬು ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ.
ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ. ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ಜೂನ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.