ಶಿಡ್ಲಘಟ್ಟ ಗ್ರಾಮಾಂತರ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರದ ಬಳಿ ಬೈಪಾಸ್ ರಸ್ತೆಯಲ್ಲಿರುವ ಶ್ರೀಸತ್ಯಸಾಯಿ ಲೇಔಟ್ ನ ಬಳಿಯ ಮೈದಾನದಲ್ಲಿರುವ ಗಿಡಗಳಲ್ಲಿ ಯಾರೋ ದುಷ್ಕರ್ಮಿಗಳು, ರಾತ್ರಿಯ ವೇಳೆಯಲ್ಲಿ ಮೀನುಗಳು ತಂದು ಲೋಡುಗಟ್ಟಲೆ ಸುರಿದು ಹೋಗುತ್ತಾರೆ. ಅವುಗಳು ಕೊಳೆತು ದುರ್ನಾತ ಬೀರುತ್ತಿದ್ದು, ಈ ಕಡೆಗೆ ಮೀನುಗಳು ತಂದು ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಚಿಂತಾಮಣಿ ಕಡೆಯಿಂದ ತರುವ ನಿಷೇಧಿತ ಕ್ಯಾಟ್ ಫಿಶ್ ಗಳನ್ನು ಪೊಲೀಸರ ಭಯದಿಂದಲೋ ಅಥವಾ ಸತ್ತುಹೋಗಿರುವ ಮೀನುಗಳನ್ನೋ ರಾತ್ರಿಯ ವೇಳೆಯಲ್ಲಿ ತಂದು ಗಿಡಗಳ ಒಳಗೆ ಯಾರಿಗೂ ಕಾಣಿಸದಂತೆ ಸುರಿದು ಹೋಗುತ್ತಾರೆ. ಅವು ಕೊಳೆತು ದುರ್ನಾತ ಬೀರುವಾಗ ಸುತ್ತಮುತ್ತಲಿನ ಲೇಔಟ್ ಗಳಲ್ಲಿ ಮನೆಗಳು ಕಟ್ಟಿಕೊಂಡು ವಾಸವಾಗಿರುವವರು, ಹಾಗೂ ಸಮೀಪದಲ್ಲಿರುವ ಹೊಟೇಲ್ ಗಳಲ್ಲಿ ಊಟ ಮಾಡುವುದಕ್ಕೆ ಬರುವವರು, ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ಲಲಿತಮ್ಮ ಮಾತನಾಡಿ, ಹಾಡಹಗಲಿನಲ್ಲೆ, ಟಿಲ್ಲರ್ ವೊಂದರಲ್ಲಿ ಮೀನುಗಳನ್ನು ತುಂಬಿಕೊAಡು ಬಂದು, ಇಲ್ಲಿ ಸುರಿದು ಹೋಗುತ್ತಿದ್ದರು. ಹೊಲದವರು ಗೊಬ್ಬರ ಬಿಡುತ್ತಿರಬಹುದೆಂದು ನಾವು ಸುಮ್ಮನಾದೆವು. ನಂತರ ಅವು ಕೊಳೆತು ದುರ್ವಾಸನೆ ಬೀರುವಾಗ ಮೀನುಗಳೆಂದು ಗೊತ್ತಾಯಿತು. ಸಂಬAಧಪಟ್ಟ ಅಧಿಕಾರಿಗಳು ಇಂತಹವರಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರಿಗೆ ತೊಂದರೆ ನೀಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.
ರಾತ್ರಿ ವೇಳೆ ಕುಡುಕರ ಹಾವಳಿ: ರಾತ್ರಿಯ ವೇಳೆ ಲೇಔಟ್ ಗಳು ಸೇರಿದಂತೆ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿಯ ವೇಳೆ ಮನೆಯಿಂದ ಹೊರಗೆ ಬರುವುದಕ್ಕೂ ಭಯವಾಗುತ್ತದೆ. ಕುಡಿದ ಮತ್ತಿನಲ್ಲಿ ಜೋರಾಗಿ ಕಿರುಚಾಡುತ್ತಿರುತ್ತಾರೆ. ರಾತ್ರಿ ೧ ಗಂಟೆಯಾದರೂ ಇಲ್ಲಿಂದ ಹೋಗುವುದಿಲ್ಲ. ಹಗಲಿನಲ್ಲಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಹೆಣ್ಣು ಮಕ್ಕಳು ಓಡಾಡುವುದಕ್ಕೆ ಭಯಪಡುವಂತಾಗಿದೆ. ಬೆಳಿಗ್ಗೆ ಎದ್ದರೆ ಕುಡುಕರು ಬಿಸಾಡಿರುವ ಮದ್ಯದ ಬಾಟಲಿಗಳ ದರ್ಶನ ಮಾಡಬೇಕು. ಕುಡುಕರ ಹಾವಳಿ ತಪ್ಪಿಸುವಂತೆ ಸ್ಥಳೀಯರಾದ ಶ್ರೀನಿವಾಸ್, ರಾಮಾಂಜಿ, ಮೀನಾಕ್ಷಿ, ಒತ್ತಾಯಿಸಿದರು.
ಕ್ರಮದ ಭರವಸೆ: ರಾತ್ರಿಯ ವೇಳೆ, ಮೀನು ಸಾಗಾಣಿಕೆ ಮಾಡಿಕೊಂಡು ಬರುವ ವಾಹನ ಸವಾರರ ಬಗ್ಗೆ ಮಾಹಿತಿ ನೀಡಿ, ಇಲ್ಲವೇ, ವಾಹನಗಳ ನಂಬರ್ ನೀಡಿದರೆ, ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಎಂದು ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ