ಗಡಿ ಭಾಗದಲ್ಲಿ ನಮ್ಮ ದೇಶವನ್ನು ಕಾಯುವ ಸೈನಿಕರ ಜೀವನ, ಸೈನಿಕನೊಬ್ಬನ ಪ್ರೀತಿ, ಪ್ರೇಮದ ಕಥಾಹಂದರವನ್ನು ಹೇಳುವ ಚಿತ್ರ ನಮೋ ಭಾರತ. ಈ ಹಿಂದೆ ಸ್ವಚ್ಚ ಭಾರತದ ಬಗ್ಗೆ ಗಾಂಧೀಜಿ ಕಂಡಿದ್ದ ಕನಸನ್ನಿಟ್ಟುಕೊಂಡು ಗಾಂಧಿ ಕನಸು ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಮೇಶ್ ಎಸ್. ಪರವಿನಾಯ್ಕರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಜೊತೆಗೆ ಚಿತ್ರದ ನಾಯಕ (ಸೈನಿಕ) ಪಾತ್ರವನ್ನೂ ಸಹ ನಿರ್ವಹಿಸಿದ್ದಾರೆ.ರೈತನೊಬ್ಬನ ಮಗ ಸೈನ್ಯ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ
ಭಯೋತ್ಪಾದನೆಯ ಅನುಭವಗಳನ್ನು ಈ ಚಿತ್ರದ ಮೂಲಕ ಹೇಳಲಾಗಿದೆ, ಈ ಮಧ್ಯೆ ಆ ಸೈನಿಕನಿಗೆ ಕಾಡುವ ತನ್ನ ತಂದೆ, ತಾಯಿಯ ನೆನಪು ಗಳು, ಜೊತೆಗೆ ಊರಲ್ಲಿ ತಾನು ಪ್ರೀತಿಸಿದ ಹುಡುಗಿಯ ನೆನಪೂ ಸಹ ಕಾಡುತ್ತದೆ.
ತಾನು ಕೆಲಸ ಮಾಡುತ್ತಿರುವ ಕಾಶ್ಮೀರ ಗಡಿಭಾಗದ ಯುವತಿಯೊಬ್ಬಳನ್ನೂ ನಾಯಕ ಲವ್ ಮಾಡುತ್ತಾನೆ. ಎ.ಟಿ.ರವೀಶ್ ಅವರ ಸಂಗೀತ, ಡಾ.ದೊಡ್ಡರಂಗೇಗೌಡ, ಡಾ.ವಿ.ನಾಗೇಂದ್ರ ಪ್ರಸಾದ್ ಅವರ. ಸಾಹಿತ್ಯ, ವೀರೇಶ್ ಎಸ್.ಟಿ.ವಿ. ಹಾಗೂ ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ,
ರುದ್ರೇಶ್ ನಾಗಸಂದ್ರ ಅವರ ಸಂಭಾಷಣೆ, ಹೈಟ್ ಮಂಜು, ನಾಗೇಶ್ ಅವರ ನೃತ್ಯ ನಿರ್ದೇಶನ, ರಾಜರತ್ನ, ವಿನಾಯಕ, ಅಂಜಿತ ಅವರ ಸಹನಿರ್ದೇಶನ ನಮೋ ಭಾರತ ಚಿತ್ರಕ್ಕಿದೆ. ತಾರಗಣದಲ್ಲಿ ರಮೇಶ್ ಪರವಿನಾಯ್ಕರ್, ಸೋನಾಲಿ ಪಂಡಿತ್ (ಹಿಂದಿ ನಟಿ) ಸುಶ್ಮಿತಾ, ಭವ್ಯ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್, ರವೀಂದ್ರ ಸಿಂಗ್ ಶರ್ಮಾ, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ಮತ್ತಿತರು ಇದ್ದಾರೆ.