ಆರ್ಸಿಬಿ ಎದುರಿನ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸುನೀಲ್ ನಾರಾಯಣ್ ನೂತನ ಮೈಲುಗಲ್ಲು ನೆಟ್ಟರು. ಇದು ವೆಸ್ಟ್ ಇಂಡೀಸ್ ಕ್ರಿಕೆಟಿಗನ 500ನೇ ಟಿ20 ಪಂದ್ಯವಾಗಿದೆ. ಸುನೀಲ್ ನಾರಾಯಣ್ 500 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಕೇವಲ 4ನೇ ಆಟಗಾರ. ವಿಂಡೀಸ್ನ 3ನೇ ಕ್ರಿಕೆಟಿಗನೂ ಹೌದು. ಉಳಿದ ಮೂವರೆಂದರೆ ಕೈರನ್ ಪೊಲಾರ್ಡ್ (660), ಡ್ವೇನ್ ಬ್ರಾವೊ (573) ಮತ್ತು ಶೋಯಿಬ್ ಮಲಿಕ್ (542).
ಈವರೆಗಿನ 499 ಪಂದ್ಯಗಳಲ್ಲಿ ಅವರು 536 ವಿಕೆಟ್ ಉರುಳಿಸಿ ತೃತೀಯ ಸ್ಥಾನಿಯಾಗಿದ್ದಾರೆ. ಡ್ವೇನ್ ಬ್ರಾವೊ (625 ವಿಕೆಟ್) ಮತ್ತು ರಶೀದ್ ಖಾನ್ (566 ವಿಕೆಟ್) ಮೊದಲೆರಡು ಸ್ಥಾನದಲ್ಲಿದ್ದಾರೆ.ಅತ್ಯಧಿಕ 30 ಓವರ್ ಮೇಡನ್ ಎಸೆದಿರುವುದು ಸುನೀಲ್ ನಾರಾಯಣ್ ಪಾಲಿನ ದಾಖಲೆಯಾಗಿದೆ. ಗರಿಷ್ಠ 10 ಆಟಗಾರರನ್ನು 5 ಹಾಗೂ ಇದಕ್ಕೂ ಹೆಚ್ಚಿನ ಸಲ ಔಟ್ ಮಾಡಿರುವುದು ಕೂಡ ಈ ಕೆರಿಬಿಯನ್ ಸ್ಪಿನ್ನರ್ನ ಸಾಧನೆ.
ಬೌಲಿಂಗ್ನಲ್ಲಿ ಯಶಸ್ಸು ಕಾಣದೇ ಹೋದರೂ ಸುನೀಲ್ ನಾರಾಯಣ್ ಬ್ಯಾಟಿಂಗ್ ಮೂಲಕ ಅಬ್ಬರಿಸಿ ತಮ್ಮ 500ನೇ ಪಂದ್ಯವನ್ನು ಸಂಭ್ರಮಿಸಿದರು. ಚೇಸಿಂಗ್ ವೇಳೆ 22 ಎಸೆತಗಳಿಂದ 47 ರನ್ ಸಿಡಿಸಿದರು (2 ಬೌಂಡರಿ, 5 ಸಿಕ್ಸರ್). ಇದರಿಂದ ಕೆಕೆಆರ್ ಪವರ್ ಪ್ಲೇಯಲ್ಲಿ 85 ರನ್ ರಾಶಿ ಹಾಕಿತು.