ರೈತ ನಾಯಕರಾದ ಭಾರತದ ಐದನೇ ಪ್ರಧಾನಿ ಚೌಧರಿ ಚರಣಸಿಂಗ್ರ ಜನ್ಮದಿನದಂದು ಅಂದರೆ ಡಿಸೆಂಬರ್ 23ರ ದಿನದಂದು ರಾಷ್ಟ್ರೀಯ ರೈತರ ದಿನಾಚರಣೆಯನ್ನು “ಕಿಸಾನ್ ದಿವಸ್” ಎಂದು ಆಚರಿಸಲಾಗುತ್ತದೆ. ರೈತನೇ ದೇಶದ ಬೆನ್ನೆಲುಬು. ನಮ್ಮ ದೇಶದ ಸಂಸ್ಕೃತಿಯಲ್ಲಿ ಕೃಷಿ ವೈದಿಕ ಕಾಲದಿಂದಲೂ ಬಂದಿದೆ.
ಋಷಿ ಮುನಿಗಳು ತಮ್ಮ ಸಾಧನೆಯ ಜೊತೆಗೆ ತಮ್ಮ ಆಹಾರ ಧಾನ್ಯವನ್ನು ತಾವೇ ಬೆಳೆದುಕೊಳ್ಳುತ್ತಿದ್ದರು, ಮನುಷ್ಯರ ಜೀವಕ್ಕೆ ಆಧಾರ ಆಹಾರ. ದವಸ ಧಾನ್ಯಗಳಿಲ್ಲದ ಯಾವ ಮನುಷ್ಯ ಬದುಕುತ್ತಾನೆ? ರೈತರು ನಮ್ಮೆಲ್ಲರ ಅನ್ನದಾತ. ನಮ್ಮ ದೇಶದ ಹೆಚ್ಚಿನ ಪ್ರಮಾಣದ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ.
ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನು ಕೂಡ ರೈತರು ಸಂಕಷ್ಟದಲ್ಲೇ ಇದ್ದಾರೆ. ದೊಡ್ಡ ಹಿಡುವಳಿದಾರರು ಮೊದಲಿನಿಂದಲೂ ಲಾಭದಾಯಕ ಜೀವನ ನಡೆಸುತ್ತಿದ್ದಾರೆ. ಸಣ್ಣ ಹಿಡುವಳಿದಾರರು, ಕಡಿಮೆ ಜಮೀನು ಹೊಂದಿರುವ ರೈತರಿಗೆ ಮೊದಲಿನಿಂದಲೂ ಸಮಸ್ಯೆಗಳು ಬಹಳವಾಗಿದ್ದು ಈಗೀಗ ಸುಧಾರಣೆಯತ್ತ ದೇಶ ಸಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಸಂಪನ್ಮೂಲಗಳ ಕೊರತೆ ಇದ್ದರೂ ಅವರು ಕೃಷಿಯಿಂದ ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಇಳುವರಿಯನ್ನು ಪಡೆಯುತ್ತಾರೆ. ಹಾಗೆ ನೋಡಿದರೆ ನಮ್ಮ ದೇಶ ಸಂಪದ್ಭರಿತ ದೇಶ, ಆದರೆ ದಲ್ಲಾಳಿಗಳ ಕೈಗೆ ಸಿಕ್ಕು ರೈತರು ಈಗಲೂ ಬಡವರಾಗಿಯೇ ಉಳಿದಿದ್ದಾರೆ.
ನಮ್ಮ ಪೂರ್ವಜರು ಹಿರಿಯರು ಬೇಸಾಯ ಮಾಡಿ ಬದುಕಿದವರೇ ಈಗೀಗ ಜೀವನಕ್ಕೆ ಬೇರೆ ಬೇರೆ ಅವಕಾಶ ಹುಡುಕಿಕೊಂಡು ಬೇಸಾಯವನ್ನು ರೈತರ ಜೊತೆ ಪಾಲಿಗೆ ಬಿಟ್ಟು ಅದನ್ನು ಆದಾಯದ ಮತ್ತೊಂದು ಮಾರ್ಗವನ್ನಾಗಿ ಮಾಡಿಕೊಂಡಿರುತ್ತೇವೆ. ಹಾಗೆ ನೋಡಿದರೆ ನಾವೆಲ್ಲರೂ ಮಣ್ಣಿನ ಮಕ್ಕಳೇ.
ಕೃಷಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇಂದಿನ ಪರಿಸ್ಥಿತಿಗೆ ನಾವು ವಿದೇಶಿ ಕಂಪನಿಗಳ ಬ್ರಾಂಡೆಡ್ ಸಾಮಾನು ಖರೀದಿ ಮಾಡುವ ಬದಲು ನಮ್ಮ ಸ್ಥಳೀಯ ರೈತರುಗಳ ಮಳಿಗೆಯಲ್ಲಿ ಸಾಮಾನು ಖರೀದಿ ಮಾಡಿ ನಮ್ಮ ದೇಶದ ಹಗೂ ದೇಶದ ಬೆನ್ನೆಲುಬಾಗಿರುವ ರೈತರೊಂದಿಗೆ ಕೈ ಜೋಡಿಸುವುದು ಮಹತ್ವದ ವಿಷಯವಾಗಿದೆ.
ಸರಕಾರವು ಮಾಡುವ ಉಪಯುಕ್ತ ಕಾನೂನಿನ ಸದುಪಯೋಗ ಮಾಡಿಕೊಂಡು ಹಾದಿ ತಪ್ಪುತ್ತಿರುವವರಿಗೆ ನೇರವಾಗ ಬೇಕಿದೆ. ಒಬ್ಬ ಜವಾಬ್ದಾರಿಯುತ ನಾಗರೀಕರಾಗಿ ರೈತರಿಗೆ ಸ್ವಂದಿಸುವುದು ನಮ್ಮ ಕರ್ತವ್ಯ ಅವರ ತಪ್ಪು ತಿಳುವಳಿಕೆಗಳನ್ನು ದೂರ ಮಾಡುವುದು ಒಂದು ರೀತಿಯ ಸಹಾಯವೇ. ನಾವು ಸದಾ ರೈತರೊಂದಿಗೆ ಇರಬೇಕು.ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಜೈ ಹಿಂದುಸ್ಥಾನ್
ಮಾಧುರಿ ದೇಶಪಾಂಡೆ, ಬೆಂಗಳೂರು