ಕೋಲಾರ: ಕಾನೂನು ಎಂದರೆ ಸಾಮಾನ್ಯ ಜ್ಞಾನವಾಗಿದ್ದು, ಸಮಾಜದ ಕಟ್ಟಕಡೆ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸುವುದು, ಉಚಿತ ಕಾನೂನು ನೆರವು ಒದಗಿಸುವುದೇ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ತಿಳಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ವಚನಕಾರರಾದ ಬಸವಣ್ಣನವರ ವಚನದ ರೂಪವನ್ನೇ ಇಂದು ಕಾನೂನಾಗಿ ಕಾಣುತ್ತಿದ್ದೇವೆ ಎಂದಅವರು, ಭಾರತದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ಸಂವಿಧಾನ ನೀಡಿದೆ, ಅದನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ಕೆಲಸ ಕಾನೂನು ಪ್ರಾಧಿಕಾರ ಮಾಡುತ್ತಿದ್ದು, ರಾಷ್ಟ್ರೀಯ ಕಾನೂನು ಸೇವೆಗಳ ಕಾಯಿದೆ 1987ರ ನ.9 ರಂದು ಜಾರಿಗೆ ಬಂದ ಹಿನ್ನಲೆ ಈ ದಿನವನ್ನು ಆಚರಿಸುತ್ತಿರುವುದಾಗಿ ತಿಳಿಸಿದರು.
ಹುಟ್ಟುವ ಮೊದಲು ಭ್ರೂಣವಾಗಿದ್ದಾಗಿನಿಂದ ಸತ್ತ ನಂತರ ಮರಣ ದಿನಾಂಕ ನೋಂದಣಿಗೂ ಕಾನೂನು ಇದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದ ಅವರು, ಪ್ರಾಧಿಕಾರ ಮಹಿಳೆಯರು, ಶೋಷಿತರು, ಮಕ್ಕಳಿಗೆ ಉಚಿತ ಕಾನೂನು ನೆರವು ಒದಗಿಸುವುದರ ಜತೆಗೆ ರಾಜಿ ಸಂಧಾನ, ಕಾನೂನು ಅರಿವು ನೀಡುವ ಕೆಲಸ ಮಾಡುತ್ತಿದೆ ಎಂದರು.
ಬಾಲಕಾರ್ಮಿಕತೆ, ಬಾಲ್ಯವಿವಾಹ ನಿಮ್ಮ ಗಮನಕ್ಕೆ ಬಂದರೆ 1098 ಗೆ ದೂರವಾಣಿ ಕರೆ ಮಾಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ಮಾದಕ ವಸ್ತು ವ್ಯಸನಕ್ಕೆ ಒಳಗಾಗದಿರಿ, ಮಾದಕ ವಸ್ತು ಮಾರಾಟ,ವಿತರಣೆ ಗಮನಕ್ಕೆ ಬಂದರೆ ದೂರು ನೀಡಿ ಎಂದರು.
ಹಿರಿಯ ವಕೀಲ ಕೆ.ಆರ್.ಧನರಾಜ್ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಮಿತಿ ಮೀರುತ್ತಿದ್ದು, ವರ್ಷಕ್ಕೆ 1 ಲಕ್ಷ ದೂರು ದಾಖಲಾಗುತ್ತಿದೆ ಎಂದು ತಿಳಿಸಿ, ಮೊಬೈಲ್ ಬಳಕೆ ಕುರಿತು ಎಚ್ಚರಿಕೆ ಅಗತ್ಯವಿದೆ, ಮೊಬೈಲ್ ಬಳಸುವಾಗ ಎಚ್ಚರ ಎಂದ ಅವರು, ರಾಷ್ಟ್ರದ್ರೋಹದ ಸಂದೇಶ ಹಾಕುವುದು ಸೇರಿದಂತೆ ತಪ್ಪು ಮಾಡಬಾರದು ಎಂದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಅಪರಾಧವಾಗಿದೆ, ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಬಳಸುವುದು ತಪ್ಪು ಎಂದ ಅವರು, ಬಾಲ್ಯ ವಿವಾಹದಿಂದಾಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು.ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ, ಪೋಕ್ಸೋ ಕಾಯಿದೆ, ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದರ ವಿರುದ್ದ ಇರುವ ಕಠಿಣ ಶಿಕ್ಷೆ ಮತ್ತಿತರ ಮಾಹಿತಿಯನ್ನು ಮಕ್ಕಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಶಾಲೆಗಳಲ್ಲಿ ಶಿಸ್ತುಪಾಲನೆ,ಸಮವಸ್ತ್ರ ನಿಗಧಿ ಎಲ್ಲವೂ ಕಾನೂನುಗಳೇ ಆಗಿದೆ, ಸಂಚಾರಿ ನಿಯಮ ಪಾಲಿಸಿ, ಕಾನೂನಿನಡಿ ನಡೆದರೆ ನಿಮ್ಮ ಜೀವನ ಸುಂದರವಾಗಿರುತ್ತದೆ ಇಲ್ಲವಾದಲ್ಲಿ ಅಪರಾಧಿಗಳಾಗಿ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಈನೆಲ-ಜಲ ಕಲಾವಿದ ವೆಂಕಟಾಚಲಪತಿ ತಮ್ಮ ಗಾಯನದ ಮೂಲಕ ಮಕ್ಕಳಿಗೆ ಕಾನೂನಿನ ಅರಿವು ನೀಡಿ, ಸಮಾಜದಲ್ಲಿ ಒಳ್ಳೆಯವರಾಗಿ, ದೇಶ ಮೆಚ್ಚುವ ಸಾಧಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿ ವೇಣುಭಾರ್ಗವ್,ಇಂದ್ರಜಿತ್ ಮಕ್ಕಳಿಗೆ ಕಾನೂನಿನ ಮಹತ್ವ, ಪಾಲನೆಯಿಂದ ಸಿಗುವ ನೆಮ್ಮದಿಯ ಜೀವನದ ಕುರಿತು ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಶ್ವೇತಾ,ಸುಗುಣಾ, ಕೆ.ಲೀಲಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.