ಏಪ್ರಿಲ್ 11 ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿ 2003ರ ಏಪ್ರಿಲ್ 11ರಂದು ಕಸ್ತೂರ ಬಾ ಗಾಂಧಿಯವರ 90ನೇ ಜನುಮದಿನದಂದು ಆರಂಭಿಸಲಾಯಿತು. ಭಾರತದಲ್ಲಿ ಇಂದಿಗೂ ಸಹ ಸುಲಭ ಹಾಗೂ ಸುರಕ್ಷಿತ ಪ್ರಸವ ಅಷ್ಟು ಸುಲಭವೇನೂ ಅಲ್ಲ.
ಆಧುನಿಕತೆ ತಂತ್ತಜ್ಞಾನದ ನಡುವೆಯೂ ಈ ರೀತಿಯ ದಿನಾಚರಣೆಯನ್ನು ಆಚರಿಸಿ ಜನರಲ್ಲಿ ಜಾಗರೂಕತೆಯನ್ನು ಮೂಡಿಸುವ ಅವಶ್ಯಕತೆ ಇಂದಿಗೂ ಇದೆ. ಈ ಬಾರಿ ಘೋಷ ವಾಕ್ಯ “ ಮನೆಯಲ್ಲಿಯೇ ಇದ್ದು ಮಗು ಮತ್ತು ಬಾಣಂತಿಯನ್ನು ಕರೋನಾ ವೈರಸ್ ಸೋಂಕಿಗೆ ತುತ್ತಾಗದಂತೆ ಕಾಪಾಡುವುದು” ಆಗಿದೆ.
ಹಿಂದಿನ ಕಾಲದಲ್ಲಿ ಸರಿಯಾದ ಸುಶಿಕ್ಷಿತ ವೈದ್ಯರ ಬಳಿ ಹೋಗದೇ ಸುಲಗಿತ್ತಿಯ ಸಹಾಯದಿಂದ ಮಕ್ಕಳು ಹುಟ್ಟುತ್ತಿದ್ದರಿಂದ ಹೀಗೆ ಪ್ರಸವ ಕಾಲದಲ್ಲಿ ಅಥವಾ ಮಗು ಹುಟ್ಟಿದ ಕೆಲವೇ ಸಮಯದಲ್ಲಿ ಸಾಯುವುದು , ಬಾಣಂತಿ ಸನ್ನಿ ಮೊದಲಾದ ಸಮಸ್ಯೆಗಳನ್ನು ಎದುರಿಸುವ ಹಾಗೆ ಆಗುತ್ತಿತ್ತು.
ಆದರೆ ಇಂದಿನ ಆಧುನಿಕ ಕಾಲದಲ್ಲಿ ಪ್ರಸವ ಆಸ್ಪತ್ರೆಯಲ್ಲಿ ಆದರೂ ಬಸುರೀ ಮತ್ತು ಬಾಣಂತಿಯ ಆರೈಕೆಯಲ್ಲಿ ವ್ಯತ್ಯಾಸ ಕಾಣುವುದರಿಂದ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಕಾಣುತ್ತಿದೆ. ಅದರಲ್ಲಿ ದೊಡ್ಡ ಸಮಸ್ಯೆಯೆಂದರೆ ಅಪೌಷ್ಠಿಕತೆಯಾಗಿದ್ದು ಅದರ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸರಕಾರವು ಹಮ್ಮಿಕೊಂಡು ಕೂಸು ಮತ್ತು ಬಾಣಂತಿಯ ಬಗೆಗೆ ತಿಳುವಳಿಕೆಯನ್ನು ಸ್ವತಃ ನೀಡುವುದರ ಜೊತೆಗೆ ಹಲವು ಅರೆ ಸರಕಾರಿ ಸಂಸ್ಥೆಗಳೂ ಕೂಡ ವಿಶೇಷವಾದ ಕಾರ್ಯಗಳನ್ನು ಮಾಡುತ್ತಿವೆ.
ಪ್ರಸ್ತುತ 2-3 ವರ್ಷಗಳಲ್ಲಿ ಬೇರೆಲ್ಲ ರೋಗಗಳಿಗಿಂತ ಕರೋನಾ ಹಾವಳಿಯೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಲಸಿಕೆ ಔಷಧಿ ಎಲ್ಲವನ್ನೂ ಪಡೆದ ಮೇಲೂ ಪದೇ ಪದೇ ನೆಗಡಿ ಕೆಮ್ಮು ಬರುವಂತೆ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿರುವ ಕೊರೊನಾ ರೋಗದಿಂದ ಕಾಪಾಡುವುದು ದೊಡ್ಡ ಸವಾಲು ಜೊತೆಗೆ ಕರ್ತವ್ಯವೂ ಆಗಿದೆ.. ಆದ್ದರಿಂದಲೇ ಈ ಬಾರಿಯ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನದ ಥೀಮ್ ಕೊರೊನಾ ಸೋಂಕಿನಿಂದ ಮಗು ಮತ್ತು ಬಾಣಂತಿಯನ್ನು ರಕ್ಷಿಸುವುದಾಗಿದೆ.
ಪ್ರಸವವೇ ಆಸ್ಪತ್ರೆಯಲ್ಲಿ ಆಗುವದರಿಂದ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚು ಇದ್ದರೂ ಕೂಡ ಆಸ್ಪತ್ರೆಗಳಲ್ಲಿ ಬಹಳಷ್ಟು ಕಾಳಜಿಯಿಂದ ನೋಡಿಕೊಂಡಿರುತ್ತಾರೆ. ಪ್ರಸವದ ನಂತರ ಮಗು ಮತ್ತು ಬಾಣಂತಿಯ ಆರೋಗ್ಯ ಮನೆಯವರ ಆದ್ಯ ಕರ್ತವ್ಯ ಆಗಬೇಕು ಯಾವುದೇ ರೀತಿಯ ಸೋಂಕು ತಾಗದಂತೆ ಕಾಪಾಡಿ ಕೊಳ್ಳಬೇಕು
. ಸಮಯ ಸಮಯಕ್ಕೆ ಪೌಷ್ಠಿಕ ಆಹಾರ, ಸಮಯ ಸಮಯಕ್ಕೆ ಸರಿಯಾದ ಲಸಿಕೆಗಳನ್ನು ಕೊಡಿಸಿ ಜೋಪಾನ ಮಾಡಬೇಕು.ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಆದ್ದರಿಂದ ಮಕ್ಕಳ ಆರೋಗ್ಯ ಮತ್ತು ತಾಯಿಯ ಸುರಕ್ಷತೆ ಬಹಳ ಮಹತ್ವವನ್ನು ಪಡೆಯುತ್ತದೆ.
Leave a Review