ಏಷ್ಯಾ ಖಂಡಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದು ಕೊಟ್ಟು ವಿಜ್ಞಾನಿ ಸಿ.ವಿ ರಾಮನ್ರವರ ಸಂಶೋಧನೆಯು 1928ರ ಫೆಬ್ರವರಿ 28ರಲ್ಲಿ ಆಯಿತು ಆ ದಿನ ನೆನಪಿನಲ್ಲಿ ಹಾಗೂ ರಾಮನ್ರವರ ಈ ಸಾಧನೆಯನ್ನು ಗೌರವಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ.” ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ” ಎಂಬ ಥೀಮ್ ನೊಂದಿಗೆ 2024ರ ವಿಜ್ಞಾನ ದಿನವನ್ನು ಅಚರಿಸಲಾಗುತ್ತಿದೆ.
ಈ ಬಾರಿಯ ಥೀಮ್ನ ಉದ್ದೇಶ ಸ್ಥಳೀಯ ಅಭಿವೃದ್ಧಿಗೆ ಸ್ಥಾನೀಯ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಅಭಿವೃದ್ಧಿಯ ಹಾದಿ ಸುಗಮವಾಗುತ್ತದೆ. ವಿದೇಶಿ ತಂತ್ರಜ್ಞಾದ ಬಳಕೆ ಮತ್ತು ಅದನ್ನು ಉಪಯೋಗಿಸಲು ಉಂಟಾಗುವ ವೆಚ್ಚವನ್ನು ಕಡಿಮೆ ಮಾಡಿ, ಸ್ಥಾನೀಯವಾಗಿ ಸಿಗುವ ವಸ್ತುಗಳಲ್ಲಿ ಇಲ್ಲಿಯೇ ದೊರಕುವ ಪದಾರ್ಥಗಳಿಂದ ಬಳಕೆಯಾಗಲು ಅನುಕೂಲ ಮತ್ತು ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಆಧಾರದ ಉಪಕರಣೆಗಳು ತಂತ್ರಜ್ಞಾನವು ದೇಶ ಅಭಿವೃದ್ಧಿಗೆ ಹಾಗೂ ಜನರ ವಿಕಾಸಕ್ಕೆ ಅನುಕೂಲ ಮಾಡುವುದರಿಂದ ಈ ಘೋಷವಾಕ್ಯದ ಥೀಮನ್ನು ಆಧರಿಸಿ ಆಚರನೆಯನ್ನು ಮಾಡಿ ಅಭಿವೃದ್ಧಿಯ ಮಾರ್ಗದಲ್ಲಿ ಪಯಣಿಸುವ ಗುರಿಯನ್ನು ಹೊಂದಿದೆ.
1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ ಕಮ್ಯುನಿಕೇಷನ್ಸ್ ಆಫ್ ಇಂಡಿಯಾ ಇವರು ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರಸ್ತಾಪಿಸಿದರು ಭಾರತ ಸರಕಾರವು ಈ ಪ್ರಸ್ತಾಪವನ್ನು ಸ್ವೀಕರಿಸಿ 1987ರ ಫೆಬ್ರವರಿ 28ರಿಂದ ಪ್ರತಿ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಿಕೊಂಡು ಬರುತ್ತಿದೆ.
ಭೌತ ವಿಜ್ಞಾನಿ ಸಿ.ವಿ ರಾಮನ್ರವರ ಜನ್ಮ 1888ರ ನವೆಂಬರ್ 7ನೇ ತಾರೀಖಿನಂದು ತಿರುಚನಾಪಳ್ಳಿಯಲ್ಲಿ ತಮಿಳು ಬ್ರಾಹ್ಮಣ ಪರಿವಾರದಲ್ಲಿ ಆಯಿತು ಅವರ ಶೈಕ್ಷಣಿಕ ಜೀವನದಲ್ಲಿ ಪ್ರೌಢಶಾಲಾ ಸಮಯದಿಂದ ಹಿಡಿದು ವಿಶ್ವವಿದ್ಯಾಲಯದ ಅಧ್ಯಯನದವರೆಗೂ ಅವರು ಎಲ್ಲ ಕಡೆಯೂ ಪ್ರಥಮ ಸ್ಥಾನವನ್ನೇ ಪಡೆದವರಾಗಿದ್ದರು.
ಅವರು ತಮ್ಮ ಮೊದಲ ಸಂಶೋಧನಾ ಪತ್ರವನ್ನು ತಮ್ಮ 16ನೇ ವಯಸ್ಸಿನಲ್ಲಿ ಬರೆದಿದ್ದರು ತಮ್ಮ 19ನೇ ವಯಸ್ಸಿಗೆ ಭಾರತೀಯ ಆರ್ಥಿಕ ಸೇವೆಗಳಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ಇವರು 1917ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ರಾಜಾ ಬಾಜಾರ್ ಸೈನ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪಾಲಿತ್ ಪ್ರೊಫೆಸರ್ ಎಂದು ನೇಮಿಸಲ್ಪಟ್ಟರು. ವಿಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಮಹತ್ತರವಾದುದು.
ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು. ಆಕಾಶವೂ ನೀಲಿ, ಸಮುದ್ರವೂ ನೀಲಿ. ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ ಇದಕ್ಕೆ ಇನ್ನೇನಾದರೂ ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ `ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ’ ಎಂದು ದೃಢಪಟ್ಟಿತು.
ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು. ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.
ರಾಮನ್ರವರಿಗೆ ನೊಬೆಲ್ ಪ್ರಶಸ್ತಿ ದೊರೆಯುವವರೆಗೂ ಏಷಿಯಾ ಖಂಡದಲ್ಲಿ ಯಾರಿಗೂ ಈ ಪ್ರಶಸ್ತಿ ದೊರೆತಿರಲಿಲ್ಲ. ಏಷಿಯಾದ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು ಎಂಬುದು ಬಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.ಸರ್ ಸಿ.ವಿ.ರಾಮನ್ ಅವರ ಮಾತು ಮನನಯೋಗ್ಯವಾಗಿದೆ: `ವಿಜ್ಞಾನದ ತಿಳುವಳಿಕೆಯಿರುವ ಮನುಷ್ಯ ನಿಸರ್ಗದ ಸೌಂದರ್ಯವನ್ನು ತನ್ನ ತಿಳುವಳಿಕೆಯ ಕಣ್ಣುಗಳಿಂದ ನೋಡುತ್ತಾನೆ ಮಾತ್ರವಲ್ಲ ಆ ಸೌಂದರ್ಯ ಮುದುಡಿಹೋಗದಂತೆ ಕೂಡಾ ಜಾಗರೂಕನಾಗಿರುತ್ತಾನೆ.
ಜ್ಞಾನವೆಂಬುದು ನಾವು ಜಗತ್ತನ್ನು ನೋಡುವ ರೀತಿಗೆ ಹೊಸ ದೃಷ್ಟಿ ಕೊಡುವುದರ ಜೊತೆಗೆ ಸೌಂದರ್ಯವನ್ನು ಆರಾಧಿಸುವ ಮನೋಭಾವವನ್ನೂ ಸೃಜಿಸುತ್ತದೆ’. ನಾವು ಇಂತಹ ಪ್ರಾಜ್ಞತೆಯನ್ನು ಉಳಿಸಿಕೊಂಡಿದ್ದೇವೆಯೇ ಎಂಬ ಆತ್ಮಾವಲೋಕನ ಮಾತ್ರವೇ ನಿಜವಾದ ವಿಜ್ಞಾನ ದಿನದ ಆಚರಣೆಯಾದೀತು.
ಇಂತಹ ಮಹಾನ್ ವಿಚೃವುಳ್ಳ ವಿಜ್ಞಾನಿ ಸಿ.ವಿ ರಾಮನ್ ಅವರ ವಿಚಾರಗಳನ್ನು ಅನುಸರಿಸಿ ನಮ್ಮ ಪ್ರಾಕೃತಿಕ ಸಂಪತ್ತನ್ನು ನಷ್ಟ ಮಾಡಿಕೊಳ್ಳದೇ ಪರಿಸರವನ್ನು ರಕ್ಷಿಸಿಕೊಂಡು ನಮ್ಮ ಹೊಸ ಹೊಸ ಆವಿಷ್ಕಾರಗಳಿಂದ ಹೊಸ ದಾಖಲೆಗಳನ್ನು ಸೃಷ್ಟಿಸಿ ನವಯುಗದಲ್ಲಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸಿ ಅಭಿವೃದ್ಧಿಯತ್ತ ನಡೆಯುವುದು ನಮಗೆ ಉದ್ಧೇಶವಾಗಿರಬೇಕು.
-ಮಾಧುರಿ ದೇಶಪಾಂಡೆ, ಬೆಂಗಳೂರು