ಕಠ್ಮಂಡು: ಕಳೆದ ವರ್ಷ ದೇಶಾದ್ಯಂತ ನಡೆದಿದ್ದ ಜನರೇಷನ್ ಝಡ್ (ಝೆನ್ ಜಿ) ಪ್ರತಿಭಟನೆಗೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನ ಬಂಧಿಸಲಾಗಿದೆ.ಕಳೆದ ವರ್ಷ ನಡೆದಿದ್ದ ಝೆನ್ ಜಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಓಲಿ ಹಾಗೂ ಲೇಖಕ್ ಅವರನ್ನ ಬಂಧಿಸಲಾಗಿದೆ. ಬಾಲೇಂದ್ರ ಶಾ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ಗೌರಿಬಹಾದೂರ್ ಕರ್ಕಿ ನೇತೃತ್ವದ ತನಿಖಾ ಆಯೋಗವು ಭದ್ರಾ ಪ್ರದೇಶದಲ್ಲಿ ನಡೆದ ಝೆನ್ ಜಿ ಪ್ರತಿಭಟನೆ ಹತ್ತಿಕ್ಕಿದ್ದಕ್ಕಾಗಿ ಓಲಿ ಮತ್ತು ಲೇಖಕ್ ಸೇರಿದಂತೆ ಇತರರನ್ನ ತಪ್ಪಿತಸ್ಥರೆಂದು ಘೋಷಿಸಿದೆ. ಅಲ್ಲದೇ ತನಿಖಾ ಆಯೋಗವು ಪ್ರತಿಭಟನೆ ಸಂದರ್ಭದಲ್ಲಿನ ನೇಪಾಳ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚಂದ್ರ ಕುಬೇರ್ ಖಪುಂಗ್ ಸೇರಿದಂತೆ ಇತರ ಉನ್ನತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.ಇಂದು ಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಮಾಜಿ ಗೃಹಸಚಿವರನ್ನ ಬಂಧಿಸಲಾಗಿದ್ದು, ಕಾನೂನು ಪ್ರಕಾರವೇ ಕ್ರಮ ಮುಂದುವರಿಯುತ್ತದೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಓಂ ಅಧಿಕಾರಿ ತಿಳಿಸಿದ್ದಾರೆ.ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಹಾಲಿ ಗೃಹಸಚಿವ ಸುಡಾನ್ ಗುರುಂಗ್, ಭರವಸೆ ಅಂದ್ರೆ ಭರವಸೆ, ಕಾನೂನಿಗಿಂತ ಯಾರೂ ಮೇಲಲ್ಲ. ಎಂದು ತಿಳಿಸಿದ್ದಾರೆ. ನಾವು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಮಾಜಿ ಗೃಹಸಚಿವ ರಮೇಶ್ ಲೇಖಕ್ ಅವರನ್ನ ಬಂಧಿಸಿದ್ದೇವೆ. ಇದು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಕ್ರಮವಲ್ಲ. ನ್ಯಾಯದ ಆರಂಭ ಮಾತ್ರ. ಈಗ ದೇಶವು ಹೊಸ ದಿಕ್ಕಿನತ್ತ ಸಾಗುತ್ತಿದೆ ಎಂದು ನಾನು ನಂಬುತ್ತೇನೆ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊAಡಿದ್ದಾರೆ.



