ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು ನೂರು ದಿನ ಸಂದಿರುವ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಶತದಿನೋತ್ಸವ ಸಮಾರಂಭ ನಡೆದಿದೆ. ವಿಧಾನಸೌಧದ ಬಾಂಕ್ವೇಟ್ ಹಾಲ್‌ನಲ್ಲಿ ನಡೆಯುತ್ತಿರುವ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದು, ಆರಂಭದಲ್ಲಿ ನಾಡಗೀತೆಯೊಂದಿಗೆ ಸಮಾರಂಭ ಆರಂಭಗೊಂಡು, ಬೆಂಗಳೂರಿನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಸಮಾರಂಭಕ್ಕೆ ಬಂದಿದ್ದ ಎಲ್ಲಾ ಗಣ್ಯರು ಆಹ್ವಾನಿತರನ್ನು ಸ್ವಾಗತಿಸಿದರು. ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಪ್ರಾಸ್ತಾವಿಕವಾಗಿ ಮಾತನಾಡಿ, 2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಅಸ್ಥಿತ್ವಕ್ಕೆ ಬಂದು ಮೂರು ವರ್ಷಗಳ ಕಾಲ ಹಲವು ಜನಪರ ಯೋಜನೆಗಳನ್ನು ಘೋಷಿಸಿ ಜಾರಿಗೆ ತಂದು ಯಶಸ್ವಿ ಸರ್ಕಾರ ಎನಿಸಿಕೊಂಡು ಆಡಳಿತ ನಡೆಸಿದ್ದಾರೆ. ಇದೀಗ ತಮ್ಮದೇ ಆದ ಆಲೋಚನೆಗಳೊಂದಿಗೆ ವಿನೂತನವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸರ್ಕಾರವನ್ನು ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದಾರೆ. ಇಂದಿಗೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು 100 ದಿನಗಳು ಸಂದಿವೆ. ಈ ನೂರು ದಿನಗಳಲ್ಲಿ ಶಿವಕುಮಾರ್ ಅವರು ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನು ಸಹಿಸದೆ ಬಿಜೆಪಿಯವರು ಮತ್ತು ವಿಪಕ್ಷ ಜೆಡಿಎಸ್‌ನವರು ತಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ವರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಮೇಲೆ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ 590ಕ್ಕೂ ಹೆಚ್ಚು ಪ್ರಣಾಳಿಕೆಗಳಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ಸರ್ಕಾರ ಹೆಚ್ಚಾಗಿ ಸಾಮಾನ್ಯ ಜನರ ಪರ ಇರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ನಿವೇಶನವಿಲ್ಲದ ರಾಜ್ಯದ 15ಲಕ್ಷಕ್ಕೂಹೆಚ್ಚು ಮಂದಿಗೆ ನಿವೇಶನ ಕೊಡುವ ಕಾರ್ಯಕ್ರಮವನ್ನು ಇನ್ನು ಸ್ವಲ್ಪ ದಿನಗಳಲ್ಲಿಯೇ ಹಮ್ಮಿಕೊಂಡು ಯಶಸ್ವಿಯಾಗಿ ಜಾರಿಗೆ ತರಲಾಗುವುದು.