ಬೆಂಗಳೂರು: ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಕರ್ನಾಟಕ ಸೇರಿದಂತೆ ದೇಶದ 17 ಕಡೆ ದಾಳಿ ನಡೆಸಿದೆ.
ಎನ್ಐಎ ಅಧಿಕಾರಿಗಳು ನಿನ್ನೆ ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆವರೆಗು ತನಿಖೆ ನಡೆಸಿದ್ದು, ನಜೀರ್ ಸೇರಿದಂತೆ ಅನೇಕರ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್ಐಎ ವಕ್ತಾರರು, ತನಿಖಾಧಿಕಾರಿಗಳು 17 ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಟಿ ನಜೀರ್, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಕೈದಿಗಳ ಬ್ರೈನ್ ವಾಶ್ ಮಾಡಿ ಅವರನ್ನೇ ಹಿಂಸಾತ್ಮಕ ಕೃತ್ಯಗಳಿಗೆ ಬಳಸುತ್ತಿದ್ದ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು ನಗರ ಪೊಲೀಸರು ಏಳು ಪಿಸ್ತೂಲ್ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್ಗಳು, ಒಂದು ಮ್ಯಾಗಜೀನ್, 45 ಲೈವ್ ರೌಂಡ್ಗಳು ಮತ್ತು ನಾಲ್ಕು ವಾಕಿ-ಟಾಕಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಲ್ಲಿಪ್ರಕರಣವನ್ನು ದಾಖಲಿಸಲಾಗಿತ್ತು.
ಎನ್ಐಎ ತಂಡ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್ ಮತ್ತು ಮೊಹಮ್ಮದ್ ಫಾರೂಕ್ ಮತ್ತು ಪರಾರಿಯಾಗಿರುವ ಜುನೈದ್ ವಾಸವಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವಾರು ಡಿಜಿಟಲ್ ಸಾಧನಗಳು, ದೋಷಾರೋಪಣೆ ದಾಖಲೆಗಳು ಮತ್ತು 7.3 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.
ಉಮರ್, ರಬ್ಬಾನಿ, ಅಹಮದ್, ಫಾರೂಕ್ ಮತ್ತು ಜುನೈದ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಕಾರ್ಯಕರ್ತ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಟಿ ನಜೀರ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಎನ್ಐಎ ಸಂಸ್ಥೆಯ ವಕ್ತಾರರು ಈ ಹಿಂದೆ ಬಹಿರಂಗಪಡಿಸಿದ್ದರು.
ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ನಂತರ, ಐವರು ಆರೋಪಿಗಳು ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಿ ನಜೀರ್ ಸೂಚನೆಯ ಮೇರೆಗೆ ಅಹ್ಮದ್ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.
2021ರಲ್ಲಿ ರಕ್ತ ಚಂದನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಜುನೈದ್, ಎನ್ಕ್ರಿಪ್ಟೆಡ್ ಸಂವಹನ ವೇದಿಕೆಗಳ ಮೂಲಕ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇತರರಿಗೆ ನೀಡಲು ಮದ್ದುಗುಂಡುಗಳನ್ನು ತನ್ನ ಬಳಿ ಸುರಕ್ಷಿತವಾಗಿ ಇರಿಸಿಕೊಂಡಿದ್ದ.
ನಂತರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಂತೆ ಹೇಳಿದ್ದ ಎಂಬುದಾಗಿ ಅಧಿಕಾರಿ ತಿಳಿಸಿದ್ದಾರೆ.ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಈ ದಾಳಿಗೂ ಮತ್ತು ಜೈಲಿನಲ್ಲೇ ಕೈದಿಗಳನ್ನು ಬ್ರೈನ್ ವಾಶ್ ಮಾಡಿ ಸ್ಫೋಟಕ್ಕೆ ಸಂಚು ರೂಪಿಸಿರುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.