ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗಾಗಿ ಏ.1 ರಂದು ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಲನ ಸಭೆ ನಡೆಯಲಿದೆ. ಸಭೆಗೆ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಸಮಂಜಸವಾಗಿದೆ. ಕಾಂಗ್ರೆಸ್ನ ಭ್ರಷ್ಟ ಸರ್ಕಾರಕ್ಕೆ ತಕ್ಕಪಾಠ ಕಲಿಸಲು ಹಾಗೂ ಜೆಡಿಎಸ್ ಪಕ್ಷದ ಉಳಿ ವಿಗಾಗಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ. ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಹುದ್ದೆಯಲ್ಲಿ ಕಾಣುವುದು ನಮ್ಮ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರ ಕನಸು.ಇದೇ ಪಕ್ಷದ ನಿಲುವಾಗಿದೆ ಎಂದು ಹೇಳಿದರು.
ಏಪ್ರಿಲ್ ಒಂದರಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಭೆ ಬೆಳಿಗ್ಗೆ 11ಗಂಟೆಗೆ ದೇವನಹಳ್ಳಿಯಲ್ಲಿ ಪ್ರಾರಂಭವಾಗುತ್ತದೆ, ನಂತರ ಮಧ್ಯಾಹ್ನ 2ಗಂಟೆಗೆ ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನ ಹಾಗೂ ಸಂಜೆ 4 ಕ್ಕೆ ನೆಲಮಂಗಲದಲ್ಲಿ ನಡೆಯಲಿದೆ.ಈ ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು ಹಾಗೂ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ನಗರಾಧ್ಯಕ್ಷ ವಿ.ಎಸ್. ರವಿಕುಮಾರ್, ಮುಖಂಡರಾದ ಮಂಜುನಾಥ್, ರಂಗಸ್ವಾಮಿ, ಸಿದ್ದಪ್ಪ, ಕೆಂಪೇಗೌಡ, ಜಗನ್ನಾಥ್ ಚಾರ್, ಶಾಂತಮ್ಮ, ದೇವರಾಜಮ್ಮ, ನರಸಿಂಹ ಬಂಡ, ಅಶ್ವಥ್ಧನಾರಾಯಣ್, ನರಸಿಂಹಮೂರ್ತಿ, ನಟರಾಜ್, ಶ್ರೀನಿವಾಸ್. ಇತರರು ಇದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಗೆ ಪಕ್ಷದ ಬಹುತೇಕ ಹಿರಿಯ ಮುಖಂಡರು ಗೈರಾಗಿದ್ದದ್ದು, ಜೆಡಿಎಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಇನ್ನೂ ಸರಿಹೋಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತು.ಪ್ರಮುಖ ಮುಖಂಡರ ಗೈರು.ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ, ಕುರುವಿಗೆರೆ ನರಸಿಂಹಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ್, ಎಸ್.ಎಂ.ಹರೀಶ್ ಗೌಡ, ನಗರಸಭೆಯ ಹಿರಿಯ ಸದಸ್ಯ ತ.ನ.ಪ್ರಭು, ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಆಂಜನಗೌಡ ಸೇರಿದಂತೆ ಬಹುತೇಕ ಮುಖಂಡರು ಪತ್ರಿಕಾಗೋಷ್ಠಿಗೆ ಗೈರುಹಾಜರಿಯೋ ಅಥವಾ ಕಡಗಣಿಸಲಾಗಿದೆಯೋ ಎಂಬ ಪ್ರಶ್ನೆ ಮೂಡಿತ್ತು.