ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಬಂದೋಬಸ್ತ್ ಆಗಿದ್ದಾರೆ ಹಾಗೂ ಅವರು ತಮ್ಮದೇ ಆದ ರೀತಿಯಲ್ಲಿ ಚಾಕಚಕ್ಯತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನೆನ್ನೆ ನಡೆದ ಅನ್ನ ಸುವಿದ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 224 ಶಾಸಕರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಇದು ಸಹಜ ಎಂದರು.
ಸದ್ಯಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ 136 ಸ್ಥಾನದ ಶಾಸಕರ ಬೆಂಬಲ ಇರುವ ಕಾರಣ ಅಭದ್ರತೆ ಎಂಬ ಪ್ರಶ್ನೆಯೇ ಅಸಂಬದ್ಧವಾದದ್ದು. ಸರ್ಕಾರ ಸುಭ್ರದವಾಗಿದೆ, ಹಾಗೆಯೇ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಬಂದೋಬಸ್ತ್ ಆಗಿದ್ದಾರೆ ಎಂದು ಮುನಿಯಪ್ಪ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದೆ ಹಾಗೆಯೇ ಸಿದ್ದರಾಮಯ್ಯ ಅವರು ಸಹ ತಮ್ಮದೇ ಆದ ರೀತಿಯಲ್ಲಿ ಚಾಕಚಕ್ಯತೆಯಿಂದ ಆಡಳಿತ ನಡೆಸುತ್ತಿದ್ದಾರೆ. 14 ಬಜೆಟ್ ಮಂಡಿಸಿ ಒಳ್ಳೆಯ ಸರ್ಕಾರ ಕೂಡ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ಮುಖ್ಯಮಂತ್ರಿಗಳು ಬಡವರಿಗೆ ಅಕ್ಕಿ ನೀಡುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.
ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಬೇರೆ ರೀತಿಯ ರಾಜಕೀಯ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನನಗೆ ಅಂತಹ ಯಾವುದೇ ಪ್ರಶ್ನೆಗಳನ್ನು ನೀವುಗಳು ಕೇಳಬೇಡಿ ಎಂದು ಮುನಿಯಪ್ಪ ಮನವಿ ಮಾಡಿದರು.ರಾಜ್ಯದಲ್ಲಿ 1ಕೋಟಿ ವಲಸೆ ಕಾರ್ಮಿಕರಿದ್ದಾರೆ ಸಚಿವ ಮಹದೇವಪ್ಪ: ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ಉದ್ಯೋಗ ಅರಸಿ ಬಂದಿರುವ 85 ಲಕ್ಷದಿಂದ 1 ಕೋಟಿ ವಲಸೆ ಕಾರ್ಮಿಕರು ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಂಕಿ ಅಂಶಗಳ ವಿವರ ನೀಡಿದ್ದಾರೆ.
ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿಗಾಗಿ ಉದ್ಯೋಗ ಅರಸಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳ ಜನರು ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದಾರೆ. ಸುಮಾರು 85 ಲಕ್ಷದಿಂದ 1 ಕೋಟಿ ತನಕ ಹೊರ ರಾಜ್ಯದವರು ಇಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದರು. ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯಿಂದ ವಲಸೆ ಕಾರ್ಮಿಕರಿಗೆ ಬಹಳ ಅನುಕೂಲವಾಗುತ್ತದೆ. ತಮ್ಮ ಊರಿನ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ತೋರಿಸಿದೆ. ಇಲ್ಲಿ ಅವರು ಪಡಿತರ ಆಹಾರ ಪಡೆಯಬಹುದು ಎಂದು ಹೇಳಿದರು.
ನಮ್ಮ ಕರ್ನಾಟಕದ ಜನರು ಕೂಡ ಹೊರ ರಾಜ್ಯದಲ್ಲಿ ಕೆಲಸ ಮಾಡುತಿದ್ದು, ಅವರಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ಡಾ.ಮಹದೇವಪ್ಪ ಅಭಿಪ್ರಾಯಪಟ್ಟರು. ಭಾರತದ ಯಾವ ವ್ಯಕ್ತಿಯೂ ಹಸಿವಿನಿಂದ ನರಳಬಾರದು ಎಂದು ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿದೆ. 12ನೇ ಶತಮಾನದ ದಾಸೋಹ ಪರಿಕಲ್ಪನೆಯಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ರೂಪಿಸಿದ್ದಾರೆ. ಈ ಮೂಲಕ ಸಂವಿಧಾನದಲ್ಲಿ ಜನರಿಗೆ ದೊರೆತಿರುವ ಹಕ್ಕು ಜಾರಿಯಾಗಿದೆ ಎಂದು ತಿಳಿಸಿದರು.