ಮೈಸೂರು (ನಂಜನಗೂಡು): ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಎಷ್ಟೇ ಹೊಟ್ಟೆಕಿಚ್ಚು ಪಟ್ಟರು ಮುಂದಿನ ಐದು ವರ್ಷ ಸರ್ಕಾರ ನಮ್ಮದೇ ಎಂದು ಹಾಗೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯವರು ಸಹ ಈಗ ಬೇರೆ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಯೋ ಜನೆಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ಶ್ರೀಕಡೆ ಮಾಲಮ್ಮರವರ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ನಾವು ಅಧಿಕಾರಕ್ಕೆ ಬಂದಿರುವುದರಿಂದ ಹೊಟ್ಟೆಕಿಚ್ಚು ಎಂದು ಮೂದಲಿಸಿದ ಸಿದ್ದರಾಮಯ್ಯ, ಆದ್ದರಿಂದಲೇ ದಿನನಿತ್ಯ ಹೊಟ್ಟೆ ಕಿವುಚುತ್ತಿದ್ದಾರೆ. ಅವರು ಎಷ್ಟೇ ಹೊಟ್ಟೆ ಹಿಚಿಕಿಕೊಂಡರೂ ಜನರ ಆಶೀರ್ವಾದಿಂದ ಇನ್ನೂ 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ನಾವು ಈ ಹಿಂದೆ 2013ರಲ್ಲಿ ನುಡಿದಂತೆ ನಡೆದುಕೊಂಡಿದ್ದೆವು.
ಈ ಬಾರಿಯೂ ಜನರಿಗೆ ಕೊಟ್ಟ ಮಾತಿನಂತೆ ನಡೆದೇ ತೀರುತ್ತೇವೆ ಎಂದರು. ಹಾಗೆಯೇ ಪ್ರಧಾನಿ ಮೋದಿ ನಂಜನಗೂಡಿಗೂ ಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಅವರು ಬಂದು ಹೋದ ನಂತರ ನಾನು, ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಕೆ.ಹರೀಶ್ಗೌಡ ಸೇರಿದಂತೆ ಎಲ್ಲರೂ ಅತ್ಯಧಿಕ ಮತಗಳಿಂದ ಗೆದ್ದೆವು ಎಂದ ಅವರು, ಮೋದಿ ಬಂದು ಕೈಬೀಸಿ ಹೋದರೆ ಜನ ಓಟ್ ಹಾಕುತ್ತಾರೆಯೇ ಎಂದು ಪ್ರಶ್ನಿಸಿದರು.
ಬಸವಾದಿ ಶರಣರು ‘ಮನುಷ್ಯನಲ್ಲಿ ದೇವರಿದ್ದಾನೆ’ ಎಂದು ಸಾರಿದರು. ನಾವು ಶುದ್ಧ ಮನಸ್ಸಿನಿಂದ ದೇವರ ಪೂಜೆ ಮಾಡಬೇಕು, ಸ್ವಾರ್ಥ ಭಾವನೆ ಇರಬಾರದು, ದೇವರು, ಧರ್ಮ, ಜಾತಿ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಬಾರದು. ಮನುಷ್ಯ, ಮನುಷ್ಯನನ್ನು ಪ್ರೀತಿಸುವಂತಾಗಬೇಕು, ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣವಾಗಬೇಕೆಂದು ಬುದ್ಧ, ಬಸವ, ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ ಜನರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ದೊರಕಿದಲ್ಲಿ ಸಮ ಸಮಾಜ ನಿರ್ಮಾಣವಾಗಲಿದೆ.
‘ರಾಜಕೀಯ ಸಮಾನತೆ ಸಾಮಾಜಿಕ ತಳಹದಿ ಮೇಲೆ ನಿಲ್ಲಬೇಕು ಇಲ್ಲವಾದಲ್ಲಿ ಜನರೇ ರಾಜಕೀಯ ಸೌಧವನ್ನು ಧ್ವಂಸ ಮಾಡಲಿದ್ದಾರೆ’ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದಲೇ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಗೊಳಿಸುವ ಮೂಲಕ ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಜನರಿಗೆ ತಮ್ಮ ಧರ್ಮದ ಆಚಾರ ವಿಚಾರಗಳನ್ನು ಆಚರಿಸಲು ಮುಕ್ತ ಅವಕಾಶವಿದೆ ಯಾವುದೇ ರಾಜಕೀಯ ಪಕ್ಕೆ ಧಾರ್ಮಿಕವಾಗಿ ಮಾತನಾಡುವ ಹಕ್ಕಿಲ್ಲ. ಕಳಲೆ ಗ್ರಾಮದ ಗ್ರಾಮಸ್ಥರು ಧಾರ್ಮಿಕ ಕಾರ್ಯದ ಮೂಲಕ ಎಲ್ಲಾ ಜನಾಂಗವನ್ನು ಒಟ್ಟಾಗಿ ಸಂಘಟಿಸಿ ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ನಾನು ಹಿಂದೆ ಲೋಕೋಪಯೋಗಿ ಮಂತ್ರಿಯಾಗಿದ್ದಾಗ ನಂಜನಗೂಡಿನಲ್ಲಿ ಕೈಗೊಂಡ 600 ಕೋಟಿಗಳಷ್ಟು ಅಭಿವೃದ್ಧಿ ಕೆಲಸಗಳಿಂದಾಗಿ ಕ್ಷೇತ್ರದ ಅಭಿವೃದ್ಧಿ ಪಥವೇ ಬದಲಾಗಿತ್ತು. ಆದರೆ, ಇದನ್ನು ಸಹಿಸಲು ಆಗದೆ ಕೆಲವರು ಮಹದೇವಪ್ಪಗೂ – ನಂಜನಗೂಡು ಕ್ಷೇತ್ರಕ್ಕೂ ಸಂಬಂದವಿಲ್ಲ ಎಂದಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್’ ಧ್ರುವನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ನಿರ್ಮಿಸುವ ಸಲುವಾಗಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನರಿಗೆ ಸಾಮಾಜಿಕ ನ್ಯಾಯದ ಜೊತೆಗೆ ಜೀವನ ಭದ್ರತೆ ಒದಗಿಸಿದ್ದಾರೆ. ಕಳಲೆ ಗ್ರಾಮದ ಮೂಲಸೌಕರ್ಯಕ್ಕೆ 2 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಅನುದಾನ ನೀಡಬೇಕು, ಜೊತೆಗೆ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆ ಹೆಚ್ಚಾಗಿದ್ದು ಬಸ್ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್, ಗಣೇಶ್ ಪ್ರಸಾದ್, ಡಾ. ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಡಾ. ಯತೀಂದ್ರ ಸಿದ್ದರಾಮಯ್ಯ, ಎಂ.ಕೆ.ಸೋಮ ಶೇಖರ್, ಮುಖಂಡರಾದ ಸುನೀಲ್ ಬೋಸ್, ಪುಷ್ಪಾ ಅಮರನಾಥ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿಎಂ. ಶಂಕರ್, ಶ್ರೀಕಂಠ ನಾಯಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಕೆಮರೀಗೌಡ, ಕಳಲೆ ಗ್ರಾಪಂ ಅಧ್ಯಕ್ಷ ಮಹೇಶ್, ಮುಖಂಡರಾದ ತಮ್ಮಗೌಡ, ಕಳಲೆ ರಾಜೇಶ್, ಚಿನ್ನಂಬಳ್ಳಿ ರಾಜು, ಎಚ್.ಎಸ್. ಮೂಗಶೆಟ್ಟಿ, ಮಾಲೇಗೌಡ ಇತರರು ಇದ್ದರು.