ಬೆಂಗಳೂರು: ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಕನ್ನಡ ನಾಡಿನವರು ಕನ್ನಡ ಭಾಷೆಯನ್ನು ಕಲಿಯಬೇಕು. ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿಸಬೇಕು ಹಾಗೂ ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ. ಯಾವುದೇ ರಾಜ್ಯದಿಂದ ಜನ ವಾಸಿಸಲು ಬಂದರೂ ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಮುಖ್ಯಮಂತ್ರಿಗಳು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜಿಸಿದ್ದ “ಬೆಂಗಳೂರು ಹಬ್ಬ 2026 ಅನ್ನು ಉದ್ಘಾಟಿಸಿ, ಜನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರು ಹಬ್ಬದಲ್ಲಿ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದ್ದು, ಬೆಂಗಳೂರಿನ ನಾಗರಿಕರಿಗೆ ಇದೊಂದು ಸುಸಂದರ್ಭ. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಮತ್ತು ಯುವ ಜನಾಂಗಕ್ಕೆ ತಲುಪಿಸುವುದು ಇದರ ಉದ್ದೇಶ. ಎಲ್ಲ ಊರುಗಳಲ್ಲಿ ಹಮ್ಮಿಕೊಳ್ಳುವ ಜಾತ್ರೆ, ಉತ್ಸವಗಳು ಜಾತಿ, ಧರ್ಮಗಳನ್ನು ಮರೆತು ಮನುಷ್ಯರಾಗಬೇಕು ಎನ್ನುವ ಸಂದೇಶವನ್ನು ಸಾರುತ್ತದೆ. ಮನುಷ್ಯರು ಪರಸ್ಪರ ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಯಾವುದೇ ಧರ್ಮವು ದ್ವೇಷಿಸಲು ಹೇಳುವುದಿಲ್ಲ ಎಂದು ಹೇಳಿದರು.
ಕನ್ನಡ ನಾಡಿನಲ್ಲಿ ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಅನೇಕರು ಬಾಳಿ ಹೋಗಿದ್ದಾರೆ. ಇವರೆಲ್ಲರೂ ನಾವೆಲ್ಲ ಮನುಷ್ಯರೇ ಎಂದು ಸಾರಿ ಸಾರಿ ಹೇಳಿದವರು. ಬಸವಣ್ಣ ಜಾತಿ, ಧರ್ಮ, ವರ್ಗ, ಕಂದಾಚಾರ, ಮೌಢ್ಯಗಳು ತೊಲಗಬೇಕು ಎಂದು ಕರೆ ನೀಡಿದ್ದರು. ಹುಟ್ಟು ಮತ್ತು ಸಾವು ಇವೆರಡರ ಮಧ್ಯೆ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯ. ಏನು ಸಾಧಿಸಿದೆವು, ಸಮಾಜಕ್ಕೆ ಏನು ಬಿಟ್ಟುಹೋಗಿದ್ದೇವೆ ಎನ್ನುವುದು ಮುಖ್ಯ. ಬೇರೆಯವರು ಅನುಸರಿಸುವ ರೀತಿಯಲ್ಲಿ ನಮ್ಮ ಹೆಜ್ಜೆ ಗುರುತುಗಳು ಇರಬೇಕೇ ಹೊರತು, ಅದನ್ನು ವಿರೋಧಿಸುವಂತಿರಬಾರದು ಎಂದು ತಿಳಿಸಿದರು.



