ಸಮಕಾಲೀನ ಕ್ರಿಕೆಟಿನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲವೇ?, ಇಂಥದೊಂದು ಅನುಮಾನ, ಗುಸುಗುಸು ಹುಟ್ಟಿಕೊಂಡಿದೆ.
2013ರ ನಂತರ ಭಾರತ ಸತತವಾಗಿ ಐಸಿಸಿ ಕೂಟಗಳ ಫೈನಲ್, ಸೆಮಿಫೈನಲ್ಗಳಲ್ಲಿ ಸೋಲುತ್ತಿದೆ. ಈ ಬಾರಿ ವೆಸ್ಟ್ ಇಂಡೀಸ್-ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆಲ್ಲಲೇಬೇಕೆಂಬ ತೀರ್ಮಾನದಲ್ಲಿರುವ ಬಿಸಿಸಿಐ, ಯುವಕರಿಗೆ ಮಣೆ ಹಾಕುವ ನಿರೀಕ್ಷೆಯಿದೆ. ಹೀಗಾಗಿ ಕೊಹ್ಲಿಗೆ ಜಾಗ ಅನುಮಾನ ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿ20 ಕ್ರಿಕೆಟ್ನ ಅಗತ್ಯಗಳಿಗೆ ತಕ್ಕಂತೆ ಕೊಹ್ಲಿ ಆಡಲು ಸಮರ್ಥರಲ್ಲ ಎಂಬ ವಾದ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಕೇಳಿ ಬರುತ್ತಿದೆಯಂತೆ. ಆದರೆ, ಈ ಬಗ್ಗೆ ದೃಢವಾಗಿ ಮಾತನಾಡಲು ಯಾರೂ ಸಿದ್ಧರಿಲ್ಲ. ಇವೆಲ್ಲದರ ನಡುವೆ ತಂಡದ ನಾಯಕತ್ವವನ್ನು ಹಿರಿಯ ಆಟಗಾರ ರೋಹಿತ್ ಶರ್ಮ ಅವರಿಗೇ ನೀಡುವ ಯೋಜನೆ ಬಿಸಿಸಿಐನದ್ದು.
ಟಿ20ಯಲ್ಲಿ ಸ್ಫೋಟಕವಾಗಿ ಆಡುವ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ತಿಲಕ್ ವರ್ಮ, ಶಿವಂ ದುಬೆ ಅವರ ಮೇಲೆ ಬಿಸಿಸಿಐ ಕಣ್ಣಿರಿಸಿದೆ. ಅಲ್ಲದೇ, ಈಗಷ್ಟೇ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲೂ ಬಹುದು. ಕೊಹ್ಲಿ ಆಡುವುದರ ಬಗ್ಗೆ ಅಂತಿಮ ನಿರ್ಧಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.