ರಾಮನಗರ: ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಉಳಿದಿದ್ದು, ಹುದ್ದೆಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ಒತ್ತಡದಲ್ಲಿದ್ದಾರೆ. ನನಗೆ ಪದವೀಧರರ ಅವಕಾಶ ನೀಡಿದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿಮಾಡಿಸುವ ಕೆಲಸ ಮಾಡುತ್ತೇನೆ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಿಬಸವಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ನೀಡುತ್ತಿರುವ ನಿರುದ್ಯೋಗ ಭತ್ಯೆಯನ್ನು ಎಲ್ಲಾ ಪದವೀಧರರಿಗೂ ವಿಸ್ತರಿಸಲು ಹೋರಾಟ ನಡೆಸಲಾಗುವುದು. ಶಿಕ್ಷಕರು ಮತ್ತು ಪದವೀಧರರ ಹಕ್ಕುಭಾದ್ಯತೆಗಳಿಗೆ ನಾನು ಸಕ್ರಿಯವಾಗಿ ಹೋರಾಟ ಮಾಡಿ ಪದವೀಧರರ ಹಿತಕಾಯುತ್ತೇನೆ ಎಂದರು.
ನಿವೃತ್ತ ಪ್ರಾಂಶುಪಾಲನಾಗಿ, ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಒಕ್ಕೂಟದ ಅಧ್ಯಕ್ಷನಾಗಿ ನಾನು ಶಿಕ್ಷಣ ಮತ್ತು ಸಂಘಟನೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ನನಗೆ ಪದವೀಧರರ ಸಮಸ್ಯೆಯ ಬಗ್ಗೆ ಸಂಪೂರ್ಣ ಅರಿವಿದ್ದು ಸಧನದಲ್ಲಿ ಪದವೀಧರರ ಕುಂದುಕೊರತೆಗಳ ಪರವಾಗಿ ದನಿ ಎತ್ತುತ್ತೇನೆ. ಪದವೀಧರರ ನನಗೆ ಈ ಚುನಾವಣೆಯಲ್ಲಿ ಸಹಕಾರ ನೀಡಬೇಕು ಎಂದು ಮನವಿಮಾಡಿದರು.
2006ರ ಏಪ್ರಿಲ್ 1ರ ಹಿಂದೆ ಸೇವೆಗೆ ಸೇರಿ ನಂತರ ಅನುದಾನಕ್ಕೊಳಪಟ್ಟವರಿಗೆ ಹಿಂದಿನ ಸೇವೆ ಪರಿಗಣಿಸಿ ವೇತನ ನಿಗದಿ ಹಾಗೂ ಹಳೇ ಪಿಂಚಣಿ ಹಾಗೂ 2006ರ ಏಪ್ರಿಲ್1ರ ನಂತರ ಸೇವೆಗೆ ಸೇರಿದವರಿಗೆ ಸರ್ಕಾರಿ – ಅನುದಾನಿತ ನೌಕರಿಗೆ ಹಳೇ ಪಿಂಚಣಿ ಮಂಜೂರಾತಿ ಕೊಡಿಸುವುದು. ಶಾಶ್ವತ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಹಾಗೂ ಸೇವೆ ಭದ್ರತೆ ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ಹಿಂದೆ ಇದ್ದಂತ ಪದವಿಪೂರ್ವ ಶಿಕ್ಷಣ ಇಲಾಖೆಯ ಹೆಸರು ಹಾಗೂ ಪರೀಕ್ಷಾ ಮಂಡಳಿಯ ಅಸ್ತಿತ್ವವನ್ನು ಮುಂದುವರೆಸಲು ಪ್ರಯತ್ನಿಸುವುದು. ಸರ್ಕಾರಿ ನೌಕರರಿಗಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ – ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರಿಗೆ ವಿಸ್ತರಿಸಲು ಪ್ರಯತ್ನಿಸುವುದಾಗಿ ಕರಬಸಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಚಂದ್ರೇಗೌಡ, ಬಾನುಮೂರ್ತಿ, ಲಿಂಗಯ್ಯ, ಆದಿನಾರಾಯಣ ರೆಡ್ಡಿ, ಸುಭಾಷ್, ಚನ್ನಬಸಪ್ಪ, ದೇವರಾಜು ಮುಂತಾದವರು ಉಪಸ್ಥಿತರಿದ್ದರು.