ಕನಕಪುರ: ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ಷೌರಿಕನ ಅಂಗಡಿಗೆ ಪರವಾನಿಗಿ ಕೊಟ್ಟು ತಿಳುವಳಿಕೆ ನೀಡಿದ್ದರೆ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರಲಿಲ್ಲ ಈ ಘಟನೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳೆ ಕಾರಣ ಪಿಡಿಒ ಅವರನ್ನು ಅಮಾನತ್ತು ಮಾಡಿ ಎಂದು ದಲಿತ ಮುಖಂಡರು ಪಟ್ಟು ಹಿಡಿದರು.
ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ವ್ಯಕ್ತಿಗೆ ಚೌರ ಮಾಡದೆ ಅಸ್ಪೃಶ್ಯತೆ ಆಚರಣೆ ಮಾಡಿದ ಸೋಮೆದ್ಯಾಪನಹಳ್ಳಿ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ದಲಿತ ಮುಖಂಡ ಶಿವಲಿಂಗಯ್ಯ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಮಾತನಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಹೋಟೆಲ್ ಮಳಿಗೆಗಳ ವ್ಯಾಪರಿಗೆ ಪರವಾನಗಿ ಕೊಟ್ಟು ತಿಳುವಳಿಕೆ ನೀಡಬೇಕು ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ಷೌರಿಕನ ಅಂಗಡಿಗೆ ಪರವಾನಗಿಯನ್ನು ಕೊಡದೆ ತಿಳುವಳಿಕೆ ಮೂಡಿಸದೆ ಇದ್ದದ್ದರಿಂದ ಅಸ್ಪೃಶ್ಯತಾ ಆಚರಣೆ ನಡೆದಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ವ್ಯಕ್ತಿಗೆ ಕ್ಷೌರ ಮಾಡದೆ ಅವಮಾನ ಮಾಡಿರುವ ಘಟನೆ ನಡೆದಿರುವ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದರೆ ಈ ಪ್ರಕರಣ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ, ಸ್ಥಳೀಯವಾಗಿ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಬಹುದಿತ್ತು.
ಗ್ರಾಮ ಪಂಚಾಯತಿ ಅಧಿಕಾರಿಗಳು ಬಂದು ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಕಾಲಹರಣ ಮಾಡಿದ್ದಾರೆ ಇದರಿಂದ ಬೇಸತ್ತು ದೂರು ದಾಖಲು ಮಾಡಿದ್ದಾರೆ ಎಲ್ಲ ಘಟನೆಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಕಾರಣ, ಪಿಡಿಒ ಕರ್ತವ್ಯ ಲೋಪದಿಂದ ಈ ಘಟನೆ ನಡೆದಿದೆ ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಳು ಘಟನೆ ನಡೆದ ಬೆನ್ನಲ್ಲೇ ಗ್ರಾಮಕ್ಕೆ ಭೇಟಿ ನೀಡಿ ನೋಂದವರಿಗೆ ಸಾಂತ್ವನ ಹೇಳಿ ಅಸ್ಪೃಶ್ಯತೆ ಆಚರಣೆ ಮಾಡಿ ಬಂಧನದಲ್ಲಿರುವ ಆರೋಪಿಗೆ ಜಾಮೀನು ಸಿಗದಂತೆ ವರದಿ ಸಲ್ಲಿಸಬೇಕಿತ್ತು ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪ ಎಸಾಗಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಸಭೆಗೆ ಬಂದಿಲ್ಲ ಸಭೆಯ ಉದ್ದೇಶ ಈಡೇರಬೇಕಾದರೆ ಗ್ರಾಮದಲ್ಲಿ ಶಾಂತಿ ನೆಲೆಸಬೇಕಾದರೆ ಸಂಬಂಧ ಪಟ್ಟ ಅಧಿಕಾರಿಗಳು ಸಭೆಗೆ ಬರಬೇಕಾಗಿತ್ತು, ನಡೆದಿರುವ ಘಟನೆಗೆ ಉತ್ತರ ಕೊಡಬೇಕಾದ ಅಧಿಕಾರಿಗಳು ನೀವಲ್ಲ ಪ್ರಮುಖವಾಗಿ ಈ ಸಭೆಗೆ ಎಸಿ ಮತ್ತು ಡಿ ವೈ ಎಸ್ ಪಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಗಿತ್ತು ಅವರಿಲ್ಲದೆ ಸಭೆ ಮಾಡುತ್ತಿರುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಷಿಹಶೀಲ್ದಾರ್ ಸ್ಮಿತಾ ರಾಮು ಮಾತನಾಡಿ. ಇಂತಹ ಆಧುನಿಕ ಸಮಾಜದಲ್ಲೂ ಮೇಲು ಕೀಳು ಜಾತಿ ಭೇದದಂತಹ ಅಸ್ಪೃಶ್ಯತೆ ಆಚರಣೆಗಳು ನಡೆಯುತ್ತಿರು ವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಯಾವುದೇ ಜಾತಿ ಧರ್ಮದವರಾದರೂ ಎಲ್ಲರಂತೆ ಅವರು ಸಹ ಮನುಷ್ಯರು,
ಎಲ್ಲರನ್ನು ಸಮಾನವಾಗಿ ನೋಡಬೇಕು ಮನುಷ್ಯರನ್ನು ಮನುಷ್ಯರ ರೀತಿ ನೋಡ ಬೇಕು ಈ ರೀತಿಯ ಘಟನೆಗಳು ಮತ್ತೊಮ್ಮೆ ಮರುಕಳಿಸ ಬಾರದು ಇಂಥ ಘಟನೆಗಳು ನಡೆಯದಂತೆ ಸ್ಥಳೀಯ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ, ಇಒ ಭೈರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್, ಪಿಡಿಒ ಮುನಿರಾಜು, ಸೇರಿದಂತೆ ಗ್ರಾಮಸ್ಥರು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.