ಬೆಂಗಳೂರು: ನಟ ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ಗೆ ಬೆಂಗಳೂರಿನ ಆರ್ ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ನಾಯಿಯ ಕೇರ್ ಟೇಕರ್ ಹೇಮಂತ್ ಅವರ ವಿಚಾರಣೆ ಮಾಡಿರುವ ಪೊಲೀಸರು, ನಂತರ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.ಈ ಹಿಂದೆ ದರ್ಶನ್ ವಿರುದ್ಧ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.
ಈ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ ಪ್ರತಿಕ್ರಿಯೆ ನೀಡಿದ್ದರು. ಆರ್ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದೆ. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಅಮಿತಾ ಮಾತನಾಡಿದ್ದರು.