ಬೆಂಗಳೂರು: ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ಗೆ ಸಿಸಿಬಿ ನೋಟಿಸ್ ನೀಡಿದೆ. ಒಮ್ಮೆ ವಿಚಾರಣೆಗೆ ಹಾಜರಾಗಿ ತೆರಳಿದ್ದ ಅಭಿಲಾಷ್ಗೆ ಈಗ ಸಿಸಿಬಿ ಎರಡನೇ ನೋಟಿಸ್ ನೀಡಿದೆ. ತನಿಖೆ ವೇಳೆ ಸರಿಯಾದ ಮಾಹಿತಿ ನೀಡದೆ ತನಿಖೆಗೆ ಸಹಕರಿಸದ ಹಿನ್ನೆಲೆ ಎರಡನೇ ಬಾರಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
ಪುಟ್ಟೇನಹಳ್ಳಿಯಲ್ಲಿ ವೃದ್ದೆಗೆ ಮನೆ ಮಾರಾಟ ಮಾಡಿಸಲು ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡಲಾಗಿತ್ತು. ವೃದ್ದೆಯ ಮನೆಗೆ ದಾಖಲಾತಿಗಳನ್ನು ಬಳಸಿ ಮೂರು ಕೋಟಿ ಲೋನ್ ಪಡೆಯಲಾಗಿತ್ತು. ಮೂರು ಕೋಟಿ ಪೈಕಿ ಒಂದು ಕೋಟಿ ಮಿಥುನ್ ಎಂಬ ಓರ್ವ ಪಾಲುದಾರನ ಮೂಲಕ ಅಭಿಲಾಷ್ ಪಾಲುದಾರನಾಗಿರುವ ಕಂಪನಿಗೆ ಬಂದಿದೆ.
ಬಳಿಕ ನಲವತ್ತು ಲಕ್ಷ ಹಣವನ್ನು ಮಿಥುನ್ ಪಡೆದಿದ್ದಾನೆ. ಉಳಿದ ಅರವತ್ತು ಲಕ್ಷ ಕಂಪನಿಯ ಅಕೌಂಟ್ ನಲ್ಲಿಯೇ ಇದೆ. ಇದು ಕಂಪನಿಯ ಪಾಲುದಾರನಾಗಿರುವ ಅಭಿಲಾಷ್ಗೂ ಸೇರಿದೆ.ಸದ್ಯ ಈ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ವಿಚಾರಣೆಗೆ ಕರೆದಿದೆ. ಆದರೆ ಅಭಿಲಾಷ್ ಮೊದಲ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡಿಲ್ಲ.
ಹೀಗಾಗಿ ಮತ್ತೆ ವಿಚಾರಣೆಗೆ ಕರೆಯಲಾಗಿದೆ. ದಾಖಲಾತಿಗಳ ಪ್ರಕಾರ ಹಣ ಅಕೌಂಟ್ಗೆ ಬಂದು ನಂತರ ಹಣ ಬಳಸಿರುವುದು ಪತ್ತೆಯಾಗಿದೆ. ಸದ್ಯ ಕೇಸ್ನಲ್ಲಿ ಇದುವರೆಗೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.