ಹೊಸಕೋಟೆ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಗೋಪಾಲ್ ಹೇಳಿದರು.
ಅವರು ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಹೊಂದುವ ಮೂಲಕ ಮುಂದೆ ಸಮಾಜದಲ್ಲಿ ಉನ್ನತವಾದ ವ್ಯಕ್ತಿತ್ವವನ್ನು ಕಾಪಾಡಿಕೊಂಡಲ್ಲಿ ಮಾತ್ರ ಶಿಕ್ಷಣ ಸಾರ್ಥಕಗೊಳ್ಳಲಿದೆ.
ಶಿಬಿರದ ಅವಧಿಯಲ್ಲಿ ಶ್ರಮದಾನ ಕೈಗೊಂಡ ವಿದ್ಯಾರ್ಥಿಗಳು ಸರಕಾರಿ ಶಾಲೆಯ ಆವರಣದ ಶುಚಿತ್ವ ಮತ್ತು ಕುಡಿಯುವ ನೀರಿನ ಟ್ಯಾಂಕುಗಳ ಸ್ವಚ್ಛತೆ, ಆವರದಲ್ಲಿ 50 ಸಸಿಗಳನ್ನು ನೆಟ್ಟಿರು ವುದು, ಸಮುದಾಯದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವಂತಹ ಉಪಯುಕ್ತ ಚಟುವಟಿಕೆಗಳನ್ನು ನೆರವೇರಿಸಿರುವುದು ಅಭಿನಂದನಾರ್ಹ.
ಇದರೊಂದಿಗೆ ಗ್ರಾಮದ ಕಲ್ಯಾಣಿಯನ್ನುಸ್ವಚ್ಛಗೊಳಿಸಿ ಹೂಳೆತ್ತುವ ಕಾರ್ಯ, ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ಧ ದೇವಾಲಯಗಳಾದ ಆಂಜನೇಯ ಹಾಗೂ ಈಶ್ವರನ ದೇವಾಲಯಗಳ ಮುಂಭಾಗವನ್ನು ಸ್ವಚ್ಛಗೊಳಿಸಿ, ಸುತ್ತಲೂ ಸಸಿ ನೆಡುವ ಮೂಲಕ ಪರಿಸರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ. ಇವರು ನೆರವೇರಿಸಿರುವ ಕಾರ್ಯವನ್ನು ಗ್ರಾಮಸ್ಥರು ಕಾಪಾಡಿಕೊಂಡಲ್ಲಿ ಮಾತ್ರ ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಲಿದೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ: ಮುನಿ ನಾರಾಯಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪ್ರಸಾದ್ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಶ್ವತ್ನಾರಾಯಣ, ಡಾ: ಈರಣ್ಣ, ಎನ್ಎಸ್ಎಸ್ ಕಾರ್ಯಕ್ರಮಧಿಕಾರಿಗಳಾದ ರಾಜೇಶ್ವರಿ ಮತ್ತು ವೀರಭದ್ರ ಸಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಹರೀಶ ಮತ್ತು ಅನುಶ್ರೀರವರುಗಳು ಭಾಗವಹಿಸಿದ್ದರು.