ಮುಂಬೈ: ಐಪಿಎಲ್ 2024 ರಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಇತ್ತೀಚೆಗೆ ಟೀಂ ಇಂಡಿಯಾ ನಾಯಕ, ಮುಂಬೈ ಇಂಡಿಯನ್ಸ್ ಹಿರಿಯ ಆಟಗಾರ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ ಒಂದು ತಂಡ ಒಬ್ಬ ಆಟಗಾರನನ್ನು ಟಾಸ್ ಬಳಿಕ ಬೌಲಿಂಗ್ ಅಥವಾ ಬ್ಯಾಟಿಂಗ್ ಗೆ ಮಾತ್ರ ಬದಲಿ ಆಟಗಾರನಾಗಿ ಬಳಕೆ ಮಾಡಬಹುದಾಗಿದೆ.ಇದರಿಂದಾಗಿ ಕೆಲವು ತಂಡಗಳು ಹೊಡೆ ಬಡಿಯ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಲಾಭ ಪಡೆಯುತ್ತಿವೆ.
ಆದರೆ ಈ ರೀತಿ ನಿಯಮದಿಂದ ಆಲ್ ರೌಂಡರ್ ಗಳ ಬೆಳವಣಿಗೆಗೆ ತೊಂದರೆಯಾಗುತ್ತಿದೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದರು.
ಇದೀಗ ಅದೇ ಅಭಿಪ್ರಾಯವನ್ನು ಆರ್ ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಕೂಡಾ ನೀಡಿದ್ದಾರೆ. ಇತ್ತೀಚೆಗೆ ಐಪಿಎಲ್ ನಲ್ಲಿ ಬಳಕೆಯಾಗುತ್ತಿರುವ ಎಲ್ಲಾ ವಿಕೆಟ್ ಗಳೂ ಬ್ಯಾಟಿಂಗ್ ಗೆ ಸಹಕಾರಿಯಾಗಿರುತ್ತದೆ. ಹೀಗಾಗಿ ಈ ನಿಯಮ ಕೇವಲ ಬ್ಯಾಟಿಗರಿಗೆ ಅನುಕೂಲವಾಗುತ್ತಿದೆ ಎಂದಿದ್ದಾರೆ. ಹಿಂದೊಮ್ಮೆ ಐಸಿಸಿ ಟಿ20 ಕ್ರಿಕೆಟ್ ನಲ್ಲಿ ಬದಲಿ ಆಟಗಾರನ ನಿಯಮ ಜಾರಿಗೆ ತಂದಿತ್ತು.