This is the title of the web page
This is the title of the web page

ಅಧಿಕಾರಿಗಳು, ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರ ಅಲೆದಾಟ ಸಹಿಸಲ್ಲ: ಶರತ್ ಬಚ್ಚೇಗೌಡ ಎಚ್ಚರಿಕೆ

ಹೊಸಕೋಟೆ: ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ, ಪಾರದರ್ಶಕ ಆಡಳಿತ ಮಾಡುವ ಮೂಲಕ ಬಡವರಿಗೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ವಿನಾಕಾರಣವಾಗಿ ಜನರನ್ನು ಕಚೇರಿಗಳಿಗೆ ಅಲೆದಾಡಿಸಿದರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಖಡಕ್ ಎಚ್ಚರಿಕೆ ನೀಡಿದರು.

ಅವರು ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹಿಂದಿನ ರಾಜಕಾರಣದಲ್ಲಿ ಹಸ್ತಕ್ಷೇಪ, ಒಬ್ಬ ವ್ಯಕ್ತಿಯ ಮನವೊಲಿಕೆಯಂತಹ ಚಾಳಿಗಳನ್ನು ಬಿಟ್ಟು ಸರಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರುವುದಾಗಲಿ, ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.

ಸರಕಾರಿ ಕಚೇರಿಗಳಿಗೆ ಪ್ರತಿದಿನ ಸಾಮಾನ್ಯ ಜನರು ವಿಧವಾ ವೇತನ, ವೃದ್ದಾಪ್ಯ ವೇತನ, ಜಾತಿ, ಆದಾಯ ಪ್ರಮಾಣಪತ್ರ ಒಳಗೊಂಡಂತೆ ಉಪಯುಕ್ತವಾದ ದಾಖಲೆಗಳನ್ನು ಪಡೆಯಲು ಬರುತ್ತಾರೆ. ಇಂತಹವರ ಕೆಲಸ ಕಾರ್ಯಗಳಿಗೆ ತಾತ್ಸಾರವಾದ ಧೋರಣೆ ತೋರದೆ ತ್ವರಿತವಾಗಿ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ಜನ ಸಾಮಾನ್ಯರು ವಿಧವಾ ವೇತನ, ವೃದ್ದಾಪ್ಯ ವೇತನ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವಾರು ರೀತಿಯ ಅರ್ಜಿಗಳನ್ನು ಹಿಡಿದು ಬರುತ್ತಾರೆ. ಜನರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ, ತ್ವರಿತವಾಗಿ ಸರಳವಾಗಿ ವಿಲೇವಾರಿ ಮಾಡುವ ಮೂಲಕ ಕೆಲಸ ಮಾಡಿಕೊಡಬೇಕು. ವಿನಾಕಾರಣ ಅಲೆದಾಡುವಂತೆ ಮಾಡಿದ್ರೆ ನಾನು ಸಹಿಸಲ್ಲ. ಆದ್ದರಿಂದ ಪ್ರತಿಯೊಬ್ಬರು ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು.

ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡುವ ದೃಷ್ಟಿಯಿಂದ ಈಗಾಗಲೆ 292 ಎಕರೆ ಜಾಗವನ್ನು ಮೀಸಲಿಟ್ಟಿರುವಪರಿಣಾಮ ಆಯಾ ಹೋಬಳಿ ವ್ಯಾಪ್ತಿಯ ಉಪ ತಹಸೀಲ್ದಾರ್,ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಶಾಸಕ ಶರತ್ ಬಚ್ಚೇಗೌಡ, ಮೀಸಲಿಟ್ಟಿರುವ ಜಾಗದಲ್ಲಿ ಏನಾದರೂ ತಂಟೆ, ತಕರಾರು, ನ್ಯಾಯಾಲಯದಲ್ಲಿ ದಾವೆ ಬಾಕಿ ಉಳಿದಿದೆಯೇ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.

ಇದೇ ಸಂಧರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕಾರ ಮಾಡಿ, ಇವುಗಳಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರ್ ಮಹೇಶ್‍ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.