ಬೇಲೂರು: ಬೇಲೂರು ತಾಲ್ಲೂಕಿನಲ್ಲಿ ದಿನಕಳೆದಂತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸಿಬ್ಬಂದಿಗಳು ಡೆಂಗ್ಯೂ ಸೇರಿದಂತೆ ಸಾಂಕ್ರಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಅಲ್ಲದೆ ಮುನ್ನಚ್ಚರಿಕೆ ವಹಿಸಬೇಕಿದೆ.
ಅಸಡ್ಡೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಯಾವುದೇ ಮೂಲಾಜು ಇಲ್ಲದೆ ಕ್ರಮಕೈಗೊಳ್ಳಲು ತಾಲ್ಲೂಕು ಆಡಳಿತ ಮೀನಾ-ಮೇಷ ಎಣಿಸುವುದಿಲ್ಲ ಎಂದು ಬೇಲೂರು ತಹಸೀಲ್ದಾರ್ ಎಂ.ಮಮತ ಎಚ್ಚರಿಕೆ ನೀಡಿದರು.ಪಟ್ಟಣದ ಹೃದಯಭಾಗದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಗ್ಯೂ ಸೇರಿದಂತೆ ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ನಡೆಸ ಸಭೆಯಲ್ಲಿ ಮಾತನಾಡಿದ ಅವರು ಬೇಲೂರು ತಾಲ್ಲೂಕಿನಲ್ಲಿ ಸದ್ಯ 40 ಪ್ರಕರಣ ಬಂದಿದೆ. ಅಲ್ಲದೆ 10 ಪ್ರಕರಣಗಳು ಡೆಂಗ್ಯೂ ತೀವ್ರತೆ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದೆ.
ಸಾಂಕ್ರಮಿಕ ರೋಗಳ ನಿಯಂತ್ರಣದಲ್ಲಿ ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಪಾತ್ರ ಪ್ರಮುಖವಾಗಿದೆ. ಸದ್ಯ ಬೇಲೂರು ಪುರಸಭೆಯಲ್ಲಿ ಡೆಂಗ್ಯೂ ಜ್ವರದಿಂದ ಯುವಕ ಬಲಿಯಾಗಿದ್ದು, ಪುರಸಭೆ ಅಸ್ವಚ್ಛತೆ ತಾಣದ ಸ್ವಚ್ಛತೆಗೆ ಮುಂದಾಗಬೇಕಿದೆ. ಅಲ್ಲದೆ ಎಲ್ಲೆಂದರಲ್ಲಿ ತೆಂಗಿನ ಚಿಪ್ಪು, ಡ್ರಮ್ಗಳ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿ ಎಂದು ಸಲಹೆ ನೀಡಿದ ಅವರು ಹಾಸ್ಟಲ್ ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆ ಕರೆದುಕೊಂಡು ಬರಬೇಕಿದೆ. ಒಂದು ವೇಳೆ ಅನಾಹುತ ನಡೆದರೆ ಅಲ್ಲಿನ ವಾರ್ಡ್ನ್ ಮತ್ತು ಅಧಿಕಾರಿಗಳು ಕಾರಣವಾಗುತ್ತಾರೆ.
ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ನಡೆಸಬೇಕಿದೆ. ವಸತಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸೊಳ್ಳೆಯ ಪರದೆಗಳನ್ನು ಉಪಯೋಗಿಸಬೇಕು. ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಜಾಗೃತಿಯಿಂದ ಕೆಲಸ ಮಾಡುವ ಮೂಲಕ ತಾಲ್ಲೂಕಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆದು ಡೆಂಗ್ಯೂ ನಿಯಂತ್ರಣದ ಬಗ್ಗೆ ಮುಚ್ಚರಿಕೆ ಕ್ರಮದ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಗಿದೆ. ಅದರೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಡ್ರಮ್ಗಳ ಸ್ವಚ್ಛತೆಗೆ ಮುಂದಾಗಿಲ್ಲ, ಆಸ್ಪತ್ರೆಯಲ್ಲಿ ಎಲ್ಲಾ ರೋಗಿಗಳಿಗೆ ಉತ್ತಮ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಸತೀಶ್, ಪುರಸಭೆ ಮುಖ್ಯಾಧಿಕಾರಿ ಇಂದು, ಕ್ಷೇತ್ರ ಸಮನ್ವಯ ಅಧಿಕಾರಿ ಶಿವಮರಿಯಪ್ಪ, ರಂಗಸ್ವಾಮಿ, ರಮೇಶ್, ಉಮೇಶ್, ಉಷಾ, ದಯಾನಂದ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.