ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ರಾಮನವಮಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಒಂದು. ಭಾರತದ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ. ಹಬ್ಬವು ನಮ್ಮ ಜೀವನದಲ್ಲಿ ಸಾಂಸ್ಕೃತಿಕ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುತ್ತದೆ. ವಿಷ್ಣುವಿನ 7ನೇ ಅವತಾರ ಶ್ರೀರಾಮನ ಜನ್ಮ ದಿನವೆಂದು ಆಚರಿಸಲಾಗುತ್ತದೆ. ರಾಮನವಮಿ ಚೈತ್ರ ಮಾಸದ ಶುಕ್ಲಪಕ್ಸದ ನವಮಿಯಂದು ಆಚರಿಸಲಾಗುತ್ತದೆ. ರಾಮನು ಸತ್ಯ, ಧರ್ಮ, ನಿಷ್ಠೆ ಮತ್ತು ಆದರ್ಶ ಜೀವನದ ಪ್ರತೀಕ. ರಾಮನ ಜೀವನ, ಆದರ್ಶಗಳು ರಾಮಾಯಣದಲ್ಲಿ ವಿವರಿಸಲ್ಪಟ್ಟಿದೆ. ರಾಮಾಯಣವನ್ನು ವೇದಾಂತ ಸಾಹಿತ್ಯದ ದೃಷ್ಟಿಯಿಂದ ಮಾತ್ರ ಓದದೆ ಚರಿತ್ರೆಯ ಮತ್ತು ಸಂಸ್ಕೃತಿಯ ದೃಷ್ಟಿಯಿಂದಲೂ ಓದಬೇಕು ಎಂದು ಬರೆಯುವ ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರು ಲೇಖಕರು ಜಿ.ಎಸ್.ಸಂಪತ್ತಯ್ಯAಗಾರ್ ಅವರು ರಾಮಾಂಕಿತ ಉಂಗುರ ಮತ್ತು ಕಾಲ ಪರಿಚಯ ಕಿರು ಕೃತಿಯಲ್ಲಿ ರಾಮನು ಹುಟ್ಟಿದ್ದು 4439 ಬಿ.ಸಿ.ಚೈತ್ರಶುಕ್ಲ ನವಮಿ ಪುನರ್ವಸು ನಕ್ಷತ್ರ 10ನೇ ಜನವರಿ ಬುಧವಾರ ಎಂದು ದಾಖಲಿಸಿದ್ದಾರೆ. ರಾಮನವಮಿ ದಿನ ಜನರು ತಮ್ಮ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ. ರಾಮಾಯಣ, ಪಾರಾಯಣ ಭಜನೆಗಳು, ಕೀರ್ತನೆಗಳು ನಡೆಯುತ್ತವೆ. ರಾಮ ನಿನ್ನ ಧ್ಯಾನ ಪ್ರೇಮ ನುಡಿಯ ಗಾನ ನೀ ಹನುಮನಿಗೆ ಪ್ರಾಣ ಸೇವಾಮೃತ ಪಾನ ಭೂಲೋಕದಲ್ಲಿ ನೀ ಅವತರಿಸಿ ರಾಮರಾಜ್ಯವ ಕಟ್ಟಿ ಬೆಳೆಸಿ ಪ್ರಜೆಗಳಿಗೆ ನೀನು ಪ್ರಿಯಕರನಯ್ಯ ಪಿತೃವಾಕ್ಯ ಪರಿಪಾಲಕನಯ್ಯ.ರಾಮನವಮಿ ದಿನ ಶ್ರೀರಾಮನ ನೆನದು ಹೀಡ ನಾಲ್ಕು ಸಾಲು ಪದ್ಯ ಬರೆದೆ. ಆದರೆ ನನ್ನ ದ್ಯಾನ ಬೇರೆತ್ತಲೋ ಸಾಗಿ ನಮ್ಮೂರಿನ ರಾಮನವಮಿಯತ್ತ ಹರಿಯಿತು.
ನಮ್ಮೂರ ಪೇಟೆ ಮತ್ತು ಕೋಟೆಯನ್ನು ಬೇರ್ಪಡಿಸಿರುವುದು ಚಂಗರವಳ್ಳಿ ನಾಲೆ. ಆಗ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕುಟುಂಬ ವಾಸವಿದ್ದಿದ್ದು ಕೋಟೆ ಭಾಗದಲ್ಲಿ. ನಮ್ಮ ಅಜ್ಜ ಅಪ್ಪಯ್ಯಶೆಟ್ಟರ ಕುಟುಂಬ ವಾಸವಿದ್ದಿದ್ದು ಪೇಟೆ ಭಾಗದಲ್ಲಿ. ನಮ್ಮಜ್ಜ ಅಪ್ಪಯ್ಯಶೆಟ್ಟರು ದೇವಾಂಗ ಜನಾಂಗದ ಶೆಟ್ಟಿ ಯಜಮಾನರಾಗಿದ್ದರು. ಇವರು ಡಾ.ಗೊರೂರರ ಆತ್ಮೀಯರಾಗಿದ್ದರೆಂದು, ಜನಾನುರಾಗಿಯಾಗಿದ್ದ ಅಜ್ಜನ ಮನೆಯ ಜಗಲಿಯಲ್ಲಿ ಊರಿನ ಜಗಳಗಳ ರಾಜಿ ಪಂಚಾಯ್ತಿ ನಡೆಯುತ್ತಿತ್ತೆಂದು ಲೇಖಕರು ಗೊರೂರು ಸೋಮಶೇಖರ್ ತಮ್ಮ ಗೊರೂರು ನೆನಪು ಕೃತಿಯಲ್ಲಿ ಬರೆದಿರುವರು. ಊರಿನ ಹಳೆಯ ಸೇತುವೆ, ಸೊಸೈಟಿ ನಿರ್ಮಾಣ ಕಾರ್ಯದಲ್ಲಿ ಅಜ್ಜನದು ಒಂದಿಷ್ಟು ಪಾತ್ರವಿದೆ. ಅವರು ನಮ್ಮೂರಿನ ಮೊದಲ ಪಿಡಬ್ಲ್ಯೂಡಿ ಗುತ್ತಿಗೆದಾರರು. ಅಜ್ಜನ ಕಾಲದಲ್ಲಿದ್ದಿದ್ದು ದೇವಾಂಗ ಜನಾಂಗದ 30 ಕುಟುಂಬಗಳು ಮಾತ್ರ. ಅಜ್ಜನ ಮನೆ ಎದುರಿಗೆ ಒಂದು ಭಜನೆ ಮನೆ ಇತ್ತು. ಆಗದು ರಾಮಮಂದಿರವಾಗಿತ್ತು. ಇದೊಂದು ಹಂಚಿನ ಮನೆಯಾಗಿದ್ದು ಆಗಿನ ದಿನಗಳಲ್ಲಿ ಇಲ್ಲಿ ಮದುವೆ, ಬೀಗರ ಔತಣ ಮೊದಲಾಗಿ ಕುಲಸ್ಥರ ಸಮಾರಂಭಗಳು ನಡೆಯುತ್ತಿದ್ದವು. ನನ್ನ ಮದುವೆ ಬೀಗರ ಔತಣ ನೀಡಿದ್ದು ಇಲ್ಲಿಯೇ. ಬೀಗರ ಔತಣವೆಂದರೆ ಯಾರೂ ಬಾಡೂಟ ಎಂದುಕೊಳ್ಳಬಾರದು. ಬಡವರಾದರೂ ಪ್ರಿಯೆ, ಬೂಂದಿ ಪಾಯಸದೂಟದ ಸಿರಿಯೇ ಅವರು ಸಿರಿದೊರೆಯಾದರೆ ಬಾದೂಷ..
ಬೂಂದಿ ಪಾಯಸವೇ ಆಗಿನ ಸಿಹಿ ಐಟಂ. ಮದುವೆ ಸಮಾರಂಭದಲ್ಲಿ ಅವರಿಗೆ ನೆಂಟರಾಗಿರಲಿ, ಇಲ್ಲದಿರಲಿ 30 ಮನೆಗೂ ವಾಲಗ ಸಮೇತ ಹೋಗಿ ಮನೆಗೆ ಯಾರೂ ಬೆಂಕಿ ಹಾಕಬೇಡಿ. ಊಟಕ್ಕೆ ಸಕುಟಂಬ ಸಮೇತರಾಗಿ ನೆಂಟರಿಷ್ಟರೊಡನೆ ಬನ್ನಿ ಎಂದು ಆಹ್ವಾನಿಸಿ ಮನೆ ಬಾಗಿಲಿಗೆ ಅರಶಿಣ ಕುಂಕುಮ ಇಟ್ಟು ಖುದ್ದು ಮನೆಗೆ ಹೋಗಿ ಆಹ್ವಾನಿಸುತ್ತಿದ್ದ ಭಾವನಾತ್ಮಕ ದಿನಗಳವು. ಶೆಟ್ಟಿ ಯಜಮಾನರ ಮನೆಯಲ್ಲಿ ಮೂವತ್ತು ಮನೆಗೂ ವಿಳ್ಳೆ ಹಂಚಲಾಗುತ್ತಿತ್ತು. ವಿಳ್ಳೆಯವು ಎಂದರೆ ಗಂಡಿನ ಮನೆಯವರಾಗಲಿ, ಹೆಣ್ಣಿನ ಮನೆಯವರಾಗಲಿ ಶಾಸ್ತ್ರೋಕ್ತವಾಗಿ ಕುಕ್ಕೆಯಲ್ಲಿ ಹೊತ್ತು ತರುವ ತಂಬಿಟ್ಟು, ಕೊಬರಿ, ಬೆಲ್ಲವನ್ನು ಹೊಡೆದು ಚೂರು ಮಾಡಿ ಎಲೆ ಅಡಿಕೆ ಜೊತೆಗಿಟ್ಟು ಹಂಚಿ ಗೌರವ ಸಲ್ಲಿಸುವುದು. ವಿಳ್ಳೆ ಹಂಚಿಕೆಯಾದ ಮೇಲೆಯೇ ಎಲ್ಲರೂ ಊಟಕ್ಕೆ ಏಳುತ್ತಿದ್ದರು. ನನ್ನ ಮದುವೆಗೆ ಎರಡು ಗಂಟೆಯಾದರೂ ಹೆಣ್ಣಿನ ಕಡೆಯವರು ಬಾರದೆ ಗಾಬರಿಯಾದ ನಮ್ಮ ತಂದೆ ನಾನೇ ವಿಳ್ಳೆ ಸಂಬAಧಿ ಪದಾರ್ಥಗಳನ್ನು ಮನೆ ತುಂಬಿಸಿಕೊAಡಿದ್ದ ಹೆಣ್ಣು ಮತ್ತು ಅವಳ ಜೊತೆಗೆ ಬಂದಿರುವ ಮಹಿಳೆ ಜೊತೆಗೆ ಹೊತ್ತು ತರುತ್ತೇನೆ ಸಕಾಲಕ್ಕೆ ಊಟಕ್ಕೆ ಹೇಳಿ ಎಂದರೂ ಅಜ್ಜನ ನಂತರದ ಶೆಟ್ಟಿ ಯಜಮಾನರಾಗಿದ್ದ ರುದ್ರಶೆಟ್ಟಿ ದೊಡ್ಡಪ್ಪ ಬಿಲ್ಕುಲ್ ಒಪ್ಪಿರಲಿಲ್ಲ. ಅಷ್ಟು ಕಟ್ಟುನಿಟ್ಟು ಇತ್ತು.
ಭಜನೆ ಮನೆಯ ರೂಂ ಒಂದರಲ್ಲಿ ರಾಮ ಸೀತಾ ಲಕ್ಷ್ಮಣರ ಸಮೇತ ಇದ್ದ ಪೋಟೋ ಇತ್ತು. ರಾಮದೊಡ್ಡಪ್ಪನೇ ಪೂಜಾರಿ. ರಾಮನವಮಿ ದಿವಸ ಎರಡು ಸೈಕಲ್ಗಳಿಗೆ ಹಲಗೆಗಳ ಸಹಾಯದಿಂದ ಮಿನಿ ರಥ ನಿರ್ಮಿಸುತ್ತಿದ್ದವರು ಕಾರ್ಯದರ್ಶಿ ಹಲಗಶೆಟ್ಟರು. ಒಂದು ಎಕ್ಸರ್ಸೈಜ್ ನೋಟ್ ಬುಕ್ ಹಿಡಿದು ಪ್ರತಿ ಮನೆಗೂ ರಾಮನವಮಿ ಹಬ್ಬ ಆಚರಣೆಗೆ ಚಂದಾ ಕೇಳಿ ಬರುತ್ತಿದ್ದರು. ಅಂದು ಬೆಳಿಗ್ಗೆ ನಾಲ್ಕು ಚಕ್ರದ ಸೈಕಲ್ ರಥ ಎಂದರೆ ಎರಡು ಸೈಕಲ್ಗಳ ಮದ್ಯೆ ಹಲಗೆ ಜೊಡಿಸಿ ದಾರದಿಂದ ಬಿಗಿದು ಮದ್ಯೆ ಭಜನೆ ಮನೆಯಲ್ಲಿದ್ದ ಶ್ರೀರಾಮನ ಪೋಟೋ ಇಟ್ಟು ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಹೋಗುತ್ತಿದ್ದವು. ಶ್ರೀರಾಮ ಪಾದಕ್ಕೆ ಗೋವಿಂದ.. ಎಂದು ಭಕ್ತಿ ಘೋಷಣೆಯಲ್ಲಿ ಸಾಗುತ್ತಿದ್ದವು. ಪೇಟೆ ಬೀದಿಯಿಂದ ಹೊರಟು ಚಂಗರವಳ್ಳಿ ನಾಲೆ ಮೇಲಿನ ಗ್ರಾಮದ ಹಳೇ ರಸ್ತೆಯಲ್ಲಿ ಸಾಗಿ ಹಾಸನ ಅರಕಲಗೊಡು ಮುಖ್ಯ ರಸ್ತೆಗೆ ಬಂದು ಊರಿನ ಮೇಲ್ಬಾಗ ಅಭಿವೃದ್ದಿ ಹೊಂದುತ್ತಿದ್ದ ನಮ್ಮ ಮನೆ ಹತ್ತಿರಕ್ಕೆ ಬರುವಷ್ಟರಲ್ಲಿ 12 ಗಂಟೆಯಾಗುತ್ತಿತ್ತು. ನಮ್ಮ ಮನೆ ಬೀದಿಯಲ್ಲೂ ಸಾಕಷ್ಟು ದೇವಾಂಗರ ಕುಟುಂಬಗಳಿದ್ದವು. ರಾಮನ ರಥ ಅವರವರ ಮನೆಯ ಬಾಗಿಲಿಗೆ ಬರುತ್ತಿದ್ದಂತೆ ರಥದೊಂದಿಗೆ ಬಂದ ಎಲ್ಲರ ಪಾದಗಳಿಗೆ ನೀರು ಹಾಕಿ ಹಣ್ಣುಕಾಯಿ ನೀಡಿ ಪೂಜೆ ಮಾಡಿಸುತ್ತಿದ್ದರು. ಬೆಲ್ಲದ ಪಾನಕ ಕೋಸಂಬರಿಯನ್ನು ಹಂಚುತ್ತಿದ್ದರು. ಬೆಲ್ಲದ ಹಲಸಿನ ತೊಳೆ ನಮಗೆ ಪ್ರಿಯವಾಗಿತ್ತು. ಇವುಗಳನ್ನು ಮೆಲ್ಲುತ್ತಾ ನಾವು ಮುಂದೆ ಮುಂದೆ ಸಾಗುತ್ತಿದ್ದವು ಇಂದು ಒಂದು ಲೇಖನ ಓದಿದೆ. ರಾಮನು ಅರಣ್ಯದಲ್ಲಿ ಇರುವಾಗ್ಗೆ ಬೇಸಿಗೆ ತುಂಬಾ ಕಠಿಣವಾಗಿತ್ತು. ಒಂದು ದಿನ ರಾಮ ಲಕ್ಷ್ಮಣರು ತುಂಬಾ ದಾಹದಿಂದ ಬಳಲುತ್ತಿದ್ದರು. ಆಗ ಒಬ್ಬ ಭಕ್ತನು ಅವರಿಗೆ ತಂಪಾದ ಪಾನಕವನ್ನು ನೀಡಿದನು. ರಾಮನು ಅದನ್ನು ಕುಡಿದು ಸಂತೋಷಪಟ್ಟನು. ಇನ್ನೊಬ್ಬ ಭಕ್ತನು ಹಸಿವು ನೀಗಿಸಲು ಕೋಸಂಬರಿ ನೀಡಿದನು. ರಾಮನು ಅದನ್ನೂ ಸ್ವೀಕರಿಸಿ ಅವನ ಭಕ್ತಿಗೆ ಆಶೀರ್ವಾದ ನೀಡಿದನು. ಆ ದಿನದಿಂದ ಭಕ್ತರು ರಾಮನವಮಿಯಂದು ಪಾನಕ ಮತ್ತು ಕೋಸಂಬರಿ ದೇವರಿಗೆ ಅರ್ಪಿಸುವ ಸಂಪ್ರದಾಯ ಪ್ರಾರಂಭವಾಯಿತು. ಇದು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಸರಳತೆ ಮತ್ತು ಭಕ್ತಿಯ ಸಂಕೇತವಾಗಿದೆ. (ಸವಿತ ಎನ್.ವಿ.)
ಊರಿನಲ್ಲಿ ಒಂದು ಸುತ್ತು ಮೆರವಣಿಗೆ ಸಾಗಿ ಒಂದೂವರೆ ಹೊತ್ತಿಗೆ ಭಜನೆ ಮನೆಗೆ ತಲುಪುತ್ತಿದ್ದವು. ಹಲಸಿನ ಹಣ್ಣಿಗೆ ಬೆಲ್ಲ ಬೆರಸಿದ ಪ್ರಸಾದ, ಕೋಸಂಬರಿ ಪಾನಕವೇ ಸವಿಯೂಟ. ಒಂದೆರಡು ವರ್ಷ ನಮ್ಮ ದೊಡ್ಡಮ್ಮ ಹೇಮಾವತಮ್ಮನವರ ಆಸಕ್ತಿಯಿಂದ ಊರೊಟ್ಟಿನ ಹಣದಲ್ಲಿ ಊಟದ ವ್ಯವಸ್ಥೆ ಆಗಿತ್ತು. ಪೂಜೆಯೆಲ್ಲಾ ಮುಗಿದು ಜಾಗಟೆ ಹೊಡೆಯುತ್ತಿದ್ದಂತೆ ಪೇಟೆ ಬೀದಿಯ ಒಕ್ಕಲಿಗರು ಮಕ್ಕಳಾದಿಯಾಗಿ ಎಲ್ಲರೂ ಭಜನೆ ಮನೆಯತ್ತ ಧಾವಿಸುತ್ತಿದ್ದರು. ಆ ಎಲ್ಲಾ ಸಂಭ್ರಮಗಳು ಈಗ ನೆನಪಾಗಿ ಉಳಿದಿವೆ. ಏಕೆಂದರೆ ಈಗ ಭಜನೆ ಮನೆಯೇ ಇಲ್ಲ. ನಾನು ಬಿಕಾಂ ವ್ಯಾಸಂಗ ಮುಗಿಸಿ ಒಂದಿಷ್ಟು ಬೆರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಕಾಲ. ಒಂದು ದಿನ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರಿಂದ ಒಂದು ಪತ್ರ ಬಂತು. ಗೊರೂರಿನಲ್ಲಿ ಕಮ್ಮಾರ ವೀರಭದ್ರಚಾರಿ ಕಿರು ಚಿತ್ರವನ್ನು ಡಿಡಿ 9ಗೆ (ಚಂದನ) ಶೂಟಿಂಗ್ ಮಾಡಲು ಬರುತ್ತೇವೆ. ಸ್ಥಳೀಯವಾಗಿ ತಮ್ಮ ಸಹಕಾರ ಬೇಕೆಂದು ಪತ್ರದಲ್ಲಿ ಕೋರಿದ್ದರು. ನಾನು ಖುಷಿಯಿಂದಲೇ ಸಹಕಾರ ಸಂಪರ್ಕ ಒದಗಿಸಿದೆ. ನನಗೊಂದು ಆಸೆಯೂ ಇತ್ತು. ನಿರಾಶೆಯೂ ಆಗಿತ್ತು. ಗೊರೂರು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಅವಕಾಶಗಳು ಇತ್ತು. ಈಗಲೂ ಇದೆ. ಹಲವು ಪ್ರಕೃತಿ ತಾಣಗಳು ಸುತ್ತಲೂ ಇವೆ. ಸಿನಿಮಾ ಶೂಟಿಂಗ್ಗೆ ಹೇಳಿ ಮಾಡಿಸಿದ ತಾಣ ನಮ್ಮೂರು. ಡಾ. ಗೊರೂರರ ಭೂತಯ್ಯನ ಮಗ ಅಯ್ಯು ನಮ್ಮೂರಲ್ಲೇ ಶೂಟಿಂಗ್ ಮಾಡಬಹುದಿತ್ತು. ಆದರೆ ಅದು ಕಳಸಾಪುರದಲ್ಲಿ ನಡೆದಿತ್ತು. ಹೇಮಾವತಿ ಕೂಡ ಇಲ್ಲಿ ಶೂಟಿಂಗ್ ಆಗಲಿಲ್ಲ. ಶೂಟಿಂಗ್ ಆದ ನೇತ್ರಪಲ್ಲವಿ ಚಿತ್ರ ತೆರೆ ಕಾಣಲಿಲ್ಲ. ಪುಟ್ಟಣ ಕಣಗಾಲ್ ಇಲ್ಲಿ ಪ್ರವಾಸಿ ಮಂದಿರದಲ್ಲಿದ್ದು ಮಸಣದ ಹೂವು ಚಿತ್ರದ ಚಿತ್ರಕಥೆ ಬರೆದು ಅಷ್ಟೇ. ಶೂಟಿಂಗ್ ಇಲ್ಲಿ ನಡೆಯಲಿಲ್ಲ. ಜೀವನ ಸಂಗ್ರಾಮ ಚಿತ್ರದ ಕಥೆಯು ಇದೆಯೇ. ಸುನಿಲ್ ಪುರಾಣಿಕ ಎಳೆಯರ ಗೆಲುವು ಟೆಲಿ ಸಿರಿಯಲ್ ಶೂಟಿಂಗ್ ಮಾಡಿದರು. ಆದರೆ ಅದು ಪ್ರಸಾರವಾದ ಬಗ್ಗೆ ನನಗೆ ತಿಳಿಯಲಿಲ್ಲ. ಇದೇ ಊರಿನಲ್ಲಿ ಓದಿರುವ ಕಾಮಿಡಿ ಕಿಲಾಡಿಗಳು ವಿನ್ನರ್ ಕೆ.ಆರ್.ಪೇಟೆ ಶಿವರಾಜ್ ಒಂದು ವರ್ಷದ ಹಿಂದೆ ತಾವೇ ನಟಿಸಿದ ಚಿತ್ರವೊಂದರ ಶೂಟಿಂಗ್ ಜಾತ್ರೆ ದಿನ ಚಿತ್ರೀಕರಿಸಿದ್ದಾರೆ. ಇದೇ ಊರಿನ ಕಾವ್ಯ ಚಿತ್ರದ ನಿರ್ಮಾಪಕರು ವೆಂಕಟರಾಮನ್ ಇಲ್ಲಿ ಶೂಟಿಂಗ್ ಮಾಡಲಿಲ್ಲ. ನಮ್ಮೂರಿನ ಕ್ಯಾಪ್ಟನ್ ಗೋಪಿನಾಥ್ ರವರ ಆತ್ಮಕಥೆ ಸುರರೈ ಪೋಟ್ರು ತಮಿಳು ಭಾಷೆಯಲ್ಲಿ ತಯಾರಾಗಿ ಅದರಲ್ಲಿ ಗೊರೂರು ಎಂದು ಒಮ್ಮೆ ಹೆಸರು ಬರುತ್ತದೆ. ಇರಲಿ ಚಂದನದಲ್ಲಿ ಕಮ್ಮಾರ ವೀರಭದ್ರಾಚಾರಿ ಟಿಲಿ ಚಿತ್ರ ಪ್ರಸಾರವಾಗಿ ನಿರ್ದೇಶಕರು ನನ್ನ ಹೆಸರನ್ನು ಕಡೆಯಲ್ಲಿ ಸ್ಮರಿಸಿದ್ದಾರೆ. ಈ ಚಿತ್ರದ ಕಥೆಯಲ್ಲಿ ಕಮ್ಮಾರ ವೀರಭದ್ರಾಚಾರಿಯ ಮನೆ ಕುಸಿದು ಬೀಳುವ ದೃಶ್ಯಕ್ಕೆ ಭಜನೆ ಮನೆಯನ್ನು ಬಳಸಿಕೊಂಡಿದ್ದರು. ಕಥೆಯಲ್ಲಿ ಕಮ್ಮಾರ ವೀರಭದ್ರಾಚಾರಿ ಜೋಯಿಸನಾಗಲು ಹೊರಡುತ್ತಾನೆ. ಈ ಕೆಲಸ ಸುಲಭ, ಗೌರವ ತರುವಂಥದ್ದು ಆಗಿದೆ. ಆದರೆ ಇದರಿಂದ ಪುರೋಹಿತರಿಗೆ ಕೆಲಸವಿಲ್ಲದಂತಾಗಿ ಬದುಕಿನ ಕತ್ತಲೆಯನ್ನು ಅನುಭವಿಸುತ್ತಾರೆ. ವೀರಭದ್ರಾಚಾರಿ ಪುರೋಹಿತನಾದ ಮೇಲೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮನೆ ಕಟ್ಟುವ ಕೆಲಸ ನಿಂತು ಹೋಗುತ್ತದೆ. ಆಚಾರಿ ತನ್ನ ಮನೆಯನ್ನು ದುರಸ್ತಿ ಮಾಡಿಕೊಳ್ಳದೇ ಕಾಲ ತಳ್ಳಿಕೊಂಡು ಬಂದು ಒಂದು ಜೋರು ಮಳೆಗೆ ಅವನ ಮನೆಯೇ ಕುಸಿದುಬೀಳುತ್ತದೆ. ಈ ದೃಶ್ಯ ಸೆರೆ ಹಿಡಿಯಲು ಭಜನೆ ಮನೆಗೆ ನೀರಿನ ಟ್ಯಾಂಕರ್ನಿಂದ ಕೃತಕ ಮಳೆ ಸುರಿಸಿ ಕುಸಿದು ಬಿದ್ದ ಮನೆಯಾಗಿ ಭಜನೆಮನೆ ಸೆರೆಯಾಯಿತು. ಕಮ್ಮಾರ ವೀರಭದ್ರಾಚಾರಿ ತನ್ನ ಮನೆ ಕುಸಿದುಬಿದ್ದಂತೆ ಮತ್ತೆ ಮನೆ ಕಟ್ಟಲು ಊರಿನಲ್ಲಿ ನಿಪುಣರಾದ ಯಾರೂ ಆಚಾರಿಗಳು ಸಿಗದೆ ತಾನೇ ತನ್ನ ಮನೆಯನ್ನು ಕಟ್ಟಿಕೊಂಡು ಜೋತಿಷ್ಯದ ಕಾಯಕಕ್ಕೆ ಗುಡ್ ಬೈ ಹೇಳಿ ಪಂಚಾAಗವನ್ನು ಅಟ್ಟದ ಮೇಲೆ ಎಸೆದು ಊರಿನವರಿಗೆ ಮನೆ ಕಟ್ಟಿಕೊಡಲು ಸಿದ್ದನಾಗುವಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ನಿಜವಾಗಿಯೂ ಬಿದ್ದುಹೋದ ಭಜನೆ ಮನೆ ಅಜ್ಜನ ಮನೆ ಊರಿನ ಚರಿತ್ರೆಯಲ್ಲಿ ಸಣ್ಣ ದಾಖಲೆಯಾಗಿ ಉಳಿದಿದೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ನಮ್ಮೂರಿನ ರಾಮ ನವಮಿ ಉತ್ಸವ ಮೆರವಣಿಗೆ ಹಳೆಯ ನೆನಪುಗಳು



