ಬೆಂಗಳೂರು: ರಾಜ್ಯದ ಎರಡು ಕಡೆ ನಡೆದಿರುವ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದೇ ತೆರೆ ಬೀಳಲಿದೆ.ಇಂದು ಸಂಜೆ 5 ಗಂಟೆ ವೇಳೆಗೆ ಬಹಿರಂಗ ಪ್ರಚಾರ ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರದ ಹೊರಗಿನಿಂದ ಆಗಮಿಸಿರುವ ವಿವಿಧ ಪಕ್ಷದ ಮುಖಂಡರು,ಕಾರ್ಯಕರ್ತರು ಅಭಿಮಾನಿಗಳು ಇಂದೇ ಕ್ಷೇತ್ರ ತೊರೆಯುವಂತೆ ಸಹ ತಿಳಿಸಲಾಗಿದೆ. ಹಾಗಾಗಿ ಎರಡು ಕ್ಷೇತ್ರಗಳ ಕೇಂದ್ರ ಭಾಗದಲ್ಲಿ ವಸತಿಗೃಹಗಳಲ್ಲಿ ವಾಸ್ತವ್ಯವಿದ್ದ ರಾಜಕೀಯ ಮುಖಂಡರುಗಳು ಕೊಠಡಿಗಳನ್ನು ತೆರವು ಮಾಡಿ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ನಾಳೆ ಸ್ಥಳೀಯ ಅಭ್ಯರ್ಥಿಗಳ ಹಿತೈಷಿ, ಕಾರ್ಯಕರ್ತರುಗಳು ಕ್ಷೇತ್ರ ವ್ಯಾಪ್ತಿಗಳು, ಮತ್ತಿತರ ಪ್ರದೇಶಗಳಿಗೆ ತೆರಳಿ ಮತದಾರರ ಮನವೊಲಿಕೆ ಕಾರ್ಯ ಮಾಡಲಿದ್ದಾರೆ.



