This is the title of the web page
This is the title of the web page

ದುಬಾರಿ ಶುಲ್ಕಕ್ಕೆ ವಿರೋಧ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ರತಿಭಟನೆ

ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹ ವಿರೋಧಿಸಿ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟೋಲ್ ಪ್ಲಾಜಾಗಳಲ್ಲಿ ಇಂದು ಮುಂಜಾನೆಯಿಂದಲೇ ಟೋಲ್ ಸಂಗ್ರಹ ಆರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿ ಟೋಲ್ ಬಳಿ ಹೋರಾಟಗಾರರು ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿರುವುದಲ್ಲದೆ ಟೋಲ್ ಸಂಗ್ರಹಣೆ ಮಾಡುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

       

ಬಿಡದಿ ಶೇಷಗಿರಿಹಳ್ಳಿಯಲ್ಲಿ ಟೋಲ್ ಸಂಗ್ರಹ ಶುರುವಾಗಿದ್ದು, ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಟೋಲ್ ಬಿಸಿ ತಟ್ಟಿದೆ. ಕಣಮಿಣಿಕಿ ಟೋಲ್‍ನಲ್ಲಿ ಆರಂಭದಲ್ಲೆ ತಾಂತ್ರಿಕ ದೋಷ ಪತ್ತೆಯಾಗಿದೆ. ಕೆಲ ಬೂತ್‍ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗದೇ ವಾಹನ ಸವಾರರು ಪರದಾಡಿದ ಘಟನೆಯೂ ನಡೆದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಅನೇಕ ಸಂಘಟನೆಗಳವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು , ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ದಿನವಿಡೀ ಟೋಲ್ ನಲ್ಲಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು.

                                               ಸುಂಕದ ವಿವರ

1.  ಕಾರು, ಜೀಪ್, ವ್ಯಾನ್‍ಗೆ ಏಕಮುಖ ಸಂಚಾರಕ್ಕೆ 135 ರೂ. ಎರಡು ಕಡೆ ಸಂಚಾರಕ್ಕೆ 205 ರೂ.
2. ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ., ತಿಂಗಳ ಪಾಸ್ ದರ 4,425 ರೂ.
3. ಲಘು ಸರಕುವಾಹನ, ಮಿನಿ ಬಸ್‍ಗಳ ಏಕಮುಖ ಸಂಚಾರಕ್ಕೆ 220 ರೂ., ಎರಡು ಕಡೆ ಸಂಚಾರಕ್ಕೆ 330 ರೂ.
ತಿಂಗಳ ಪಾಸ್ ದರ 7315 ರೂ.
4.  ಟ್ರಕ್/ಬಸ್ ಏಕಮುಖ ಸಂಚಾರಕ್ಕೆ 460 ರೂ, ಎರಡು ಕಡೆ ಸಂಚಾರಕ್ಕೆ 690 ರೂ., ತಿಂಗಳ ಟೋಲ್ ಪಾಸ್ ದರ 15,325 ರೂ.
5. 3 ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರ 500, ಎರಡು ಕಡೆ 750 ರೂ.
6. ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂ., ಎರಡು ಕಡೆ ಸಂಚಾರಕ್ಕೆ 1315 ರೂ.