ಬ್ರಿಸ್ಬೇನ್: ಜಪಾನಿನ ನವೋಮಿ ಒಸಾಕಾ ಅಮ್ಮನಾದ ಬಳಿಕ ಮೊದಲ ಸಲ ವೃತ್ತಿಪರ ಟೆನಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಪಂದ್ಯವನ್ನು ಜಯಿಸಿದ್ದಾರೆ.
15 ತಿಂಗಳ ವಿರಾಮದ ಬಳಿಕ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಪಂದ್ಯಾವಳಿಯಲ್ಲಿ ರ್ಯಾಕೆಟ್ ಹಿಡಿದು ಬಂದ ಮಾಜಿ ನಂ.1 ಆಟಗಾರ್ತಿ ನವೋಮಿ ಒಸಾಕಾ, ಸೋಮವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಟಮಾರ ಕೊರ್ಪಾಶ್ ವಿರುದ್ಧ 6-3, 7-6 (9) ಅಂತರದಿಂದ ಗೆದ್ದು ಬಂದರು.
ನಾನು ಸೂಪರ್ ನರ್ವಸ್ ಆಗಿದ್ದೆ ಎಂಬುದಾಗಿ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಒಸಾಕಾ, ಗರ್ಭಿಣಿಯಾದ ಕಾರಣ 2023ರ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಜುಲೈಯಲ್ಲಿ ಲಾಸ್ ಏಂಜಲೀಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು.
ಮಗುವಿನ ಹೆಸರು `ಶೈ’. ಯುಎಸ್ನಲ್ಲಿ ನೆಲೆಸಿರುವ ಜಪಾನ್ ಮೂಲದ ರ್ಯಾಪರ್ ಹಾಗೂ ಪ್ಲೇಯರ್ ಕೋರ್ಡೆ, ಈ ಟೆನಿಸಿಗಳ ಬಾಳಸಂಗಾತಿ ಆಗಿದ್ದಾರೆ.ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರಿನಾ ಸಬಲೆಂಕಾ, ಎಲೆನಾ ರಿಬಾಕಿನಾ. ಜೆಲೆನಾ ಒಸ್ಟಾಪೆಂಕೊ, ವಿಕ್ಟೋರಿಯಾ ಅಜರೆಂಕಾ, ಸೋಫಿಯಾ ಕೆನಿನ್, ಸ್ಲೋನ್ ಸ್ಟೀಫನ್ಸ್ ಮೊದಲಾದವರೆಲ್ಲ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ.