ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಬರುವುದು ಮನೆ ಮನಗಳಿಂದ. ಹಿರಿಯರ ನಡೆ ನುಡಿ ನೋಡಿ ಕಲಿಯುವ ಮಕ್ಕಳಿಗೆ ಆಚಾರ ವಿಚಾರ ತಿಳಿಯುವುದು ಹಬ್ಬಗಳಿಂದ ಹಾಗೂ ಊರು ಕೇರಿಗಳಲ್ಲಿ ನಡೆಯುವ ಧಾರ್ಮಿಕ ವಿಚಾರಗಳಾದ ಜಾತ್ರೆ/ತೇರು ಮತ್ತು ಊರಿನ ಹಬ್ಬಗಳಿಂದ.
ಈಗಿನ ಕಾಲದ ಕೆಲವು ಮಕ್ಕಳು ಮೊಬೈಲ್, ಕಂಪ್ಯೂಟರ್ ಗಳಿಗೆ ಮಾರು ಹೋಗಿ, ಆಟ, ಪಾಠ, ಹಬ್ಬ- ಹುಣ್ಣಿಮೆ ಎಲ್ಲವೂ ಮೊಬೈಲ್ ನಲ್ಲಿ ಎನ್ನುವಂತಾಗಿದೆ. ಇಂದಿನ ಮಕ್ಕಳಿಗೆ ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಮನೆಯ ಹಿರಿಯರು ಹಾಗೂ ಶಾಲೆಯ ಶಿಕ್ಷಕರು ಮುಂದಾಗಬೇಕಿದೆ.
ನಮ್ಮ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಪುರಾಣ ಇತಿಹಾಸಗಳನ್ನು ಹೊಂದಿದೆ. ಇಂತಹ ಹಬ್ಬದ ಬಗ್ಗೆ ಮಕ್ಕಳಿಗೆ ತಿಳಿಸಿ ಹಿರಿಯರು ಕಿರಿಯರು ಸೇರಿ ಸಂಭ್ರಮಿಸುವ ಮೊದಲ ಹಬ್ಬ ‘ಸಂಕ್ರಾಂತಿ ಹಬ್ಬ’. ಸಂಕ್ರಾಂತಿ ಹಬ್ಬವೆಂದರೆ ಮಕ್ಕಳ ಹಬ್ಬ. ಹೆಣ್ಣು ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು ಅಲಂಕಾರ ಮಾಡಿಕೊಂಡು ಮನೆ ಮನೆಗೂ ಹೋಗಿ ಎಳ್ಳು ಬೆಲ್ಲ ಬೀರುವುದನ್ನು/ಕೊಡುವುದನ್ನು ನೋಡುವುದೇ ಚೆಂದ.
ಚಿಣ್ಣರ ಹಬ್ಬವೇ ಆಗಿರುವ ಸಂಕ್ರಾಂತಿ ಸುಗ್ಗಿಯಲ್ಲಿ “ಕತ್ತರಿಗುಪ್ಪೆ ಗ್ರಾಮದ” ಏರಿಯಾ ಮಕ್ಕಳೆಲ್ಲರೂ ಒಂದೇ ಕಡೆ ಸೇರಿ ಹಬ್ಬವನ್ನು ಆಚರಿಸುವಂತೆ ಮಾಡಿದ್ದರು. ಇವರು ನಕ್ಕು ನಲಿಯುವುದನ್ನು ನೋಡಿದ ಹಿರಿಯರು ತಮ್ಮ ಬಾಲ್ಯದ ಸವಿ ನೆನಪಿನಿಂದ ಮುಗುಳ್ನಗೆ ಬೀರುತ್ತಿದ್ದರು. ಮಕ್ಕಳಿಗೆ ಹಬ್ಬದ ವಿಶೇಷತೆ ಬಗ್ಗೆ ತಿಳಿಸಿ ಅವರಲ್ಲಿ ಉತ್ಸಾಹ ತುಂಬಿ ಮೊಬೈಲ್, ಕಂಪ್ಯೂಟರ್ ಎಂಬ ಕೈಗೊಂಬೆಯಿಂದ ಆಚೆ ಬಂದು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದು ಮಕ್ಕಳ ಪೋಷಕರು ಹಾಗೂ ಧಾರ್ಮಿಕ ಕಾರ್ಯಕ್ರಮದ ಆಯೋಜಕರು. ನಿಜಕ್ಕೂ ಇವರ ಕಾರ್ಯವೈಖರಿ ಮೆಚ್ಚುವಂತಹುದು.
ಮಕ್ಕಳಿಗೆ ಸಂಕ್ರಾಂತಿ ಹಬ್ಬದ ವಿಶೇಷತೆಗಳನ್ನು ತಿಳಿಸಿ ರಂಗೋಲಿ ಸ್ಪರ್ದೆ, ಹೂ ಕಟ್ಟುವ ಸ್ಪರ್ಧೆಯಲ್ಲಿ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸಂತಸ ಪಡುತ್ತಿದ್ದರು. ಬೀಸುವ ಕಲ್ಲಿನಲ್ಲಿ ರಾಗಿ ಹಾಕಿ ಬೀಸುತ್ತಾ ಹಿಟ್ಟು ಬೀಳುವುದನ್ನು ನೋಡಿದ ಪುಟ್ಟ ಪುಟ್ಟ ಮಕ್ಕಳು ಆಶ್ಚರ್ಯ ಪಡುತ್ತಿದ್ದರು. ಹಲವು ಬಗೆಯ ಆಟವಾಡಿದರು. ಸಂಜೆಯಾಗುತ್ತಿದ್ದಂತೆ “ಹಸು/ದನಗಳು ಕಿಚ್ಚು ಹಾಯುವುದನ್ನು” ನೋಡಿ ಕೇಕೆ ಹಾಕುತ್ತಾ ಕುಣಿದಾಡಿದರು. ಇಡೀ ದಿನ ಚಿಲುಮೆಯ ಬುಗ್ಗೆಗಳಾಗಿ ಚಿಣ್ಣರು ಸಂಭ್ರಮ ಪಡುತ್ತಿದ್ದರು.
ಹಿರಿಯರ ಮಾತಿನಂತೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂತಹ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಆಚಾರ ವಿಚಾರಗಳು ತಿಳಿದಿದ್ದರೆ ಮುಂದೆ ಎಲ್ಲವನ್ನೂ ರೂಢಿಸಿಕೊಂಡು ಕಾಲಾಂತರಕ್ಕೂ ಉಳಿಯುವಂತಾಗುತ್ತದೆ.
ಡಾ. ಆರ್. ಶೈಲಜ ಶರ್ಮ