ಹೊಸಕೋಟೆ: ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ನಗರವನ್ನು ಮಾದರಿಯನ್ನಾಗಿಸಲು ಪಣತೊಟ್ಟಿದ್ದು, ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರಸಭೆ ವ್ಯಾಪ್ತಿಯ 5ನೇ ವಾರ್ಡ್ನ ಕೆಳಗಿನಪೇಟೆಯ ದೊಡ್ಡನಾಲೆ ಯನ್ನು ಸುಮಾರು 1 ಕೋಟಿ ರೂ.ಗಳ ವೆಚ್ಚದಲ್ಲಿ ಹಾಗೂ 1ನೇ ವಾರ್ಡ್ ಸ್ವಾಮಿ ವಿವೇಕಾನಂದನಗರದ ಮುಖ್ಯರಸ್ತೆಯಲ್ಲಿ ಸುಮಾರು 80 ಲಕ್ಷ ರೂ.ಗಳ ವೆಚ್ಚದ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಆದ್ದರಿಂದ ಮತದಾರರು ಅಭಿವೃದ್ದಿಗೆ ಆದ್ಯತೆ ನೀಡುವವರಿಗೆ ಆಶೀರ್ವಾದ ನಿರಂತರವಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ನಗರದ ಅಭವೃದ್ಧಿಗೆ ಅಗತ್ಯವಾದ ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜಹೀರ್ ಅಬ್ಬಾಸ್, ನಗರಸಭೆ ಸದಸ್ಯರಾದ ಕೇಶವಮೂರ್ತಿ, ಮಂಜುನಾಥ್, ರೂಪಾ ಉಮೇೀಶ್, ಜಮುನಾ ಹರೀಶ್, ಉದ್ಯಮಿ ಬಿ.ವಿ.ಬೈರೇಗೌಡ, ಕೃಷಿ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಎಂ.ಸಿ.ವೆಂಕಟರಮಣಪ್ಪ, ಮುಖಂಡರಾದ ಜಿ.ಎಸ್.ಉದಯಕುಮಾರ್, ಕೃಷ್ಣಮೂರ್ತಿ, ರಾಕೇಶ್, ಗೋಪಿ, ಆರ್.ಟಿ.ಸಿ.ಗೋವಿಂದರಾಜ್ ಇನ್ನಿತರರು ಭಾಗವಹಿಸಿದ್ದರು.