ಮೊಹಾಲಿ: ಐಪಿಎಲ್ ನಲ್ಲಿ ಇಂದು ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ವರ್ಷದ ಬಳಿಕ ರಿಷಬ್ ಪಂತ್ ಕ್ರಿಕೆಟ್ ಕಣಕ್ಕಿಳಿಯುತ್ತಿರುವ ಕಾರಣಕ್ಕೆ ಈ ಪಂದ್ಯ ವಿಶೇಷವಾಗಿದೆ. ರಸ್ತೆ ಅಪಘಾತವಾದ ಬಳಿಕ ರಿಷಬ್ ಪಂತ್ ಸಕ್ರಿಯ ಕ್ರಿಕೆಟ್ ನಿಂದ ಒಂದೂವರೆ ವರ್ಷದಿಂದ ದೂರವಿದ್ದಾರೆ.
ರಸ್ತೆ ಅಪಘಾತದಲ್ಲಿ ಅವರು ಬದುಕುಳಿದಿದ್ದೇ ಪವಾಡ. ಅದರ ಜೊತೆಗೆ ಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿಯೂ ಈಗ ಒಂದೇ ವರ್ಷಕ್ಕೆ ಮತ್ತೆ ಕ್ರಿಕೆಟ್ ಕಣಕ್ಕೆ ಮರಳುತ್ತಿರುವುದು ವಿಶೇಷ. ಈ ಆವೃತ್ತಿಯಲ್ಲಿ ಅವರು ಮತ್ತೆ ಡೆಲ್ಲಿ ತಂಡದ ನಾಯಕನಾಗಿ ಕಣಕ್ಕೆ ಮರಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ಗೆ ಕಳೆದ ಸೀಸನ್ ಅಷ್ಟೊಂದು ಉತ್ತಮವಾಗಿರಲಿಲ್ಲ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡ ಮುನ್ನಡೆಸಿದ್ದರು.
ಆದರೆ ಈ ಬಾರಿ ರಿಷಬ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಡೇವಿಡ್ ವಾರ್ನರ್ ಅದ್ಭುತ ಫಾರ್ಮ್ ನಲ್ಲಿದ್ದು ಅವರಿಗೆ ಸಾಥ್ ನೀಡಲು ಪೃಥ್ವಿ ಶಾ, ಯಶ್ ಧುಲ್ ರಂತಹ ಪ್ರತಿಭಾವಂತರಿದ್ದಾರೆ. ಜೊತೆಗೆ ಮಿಚೆಲ್ ಮಾರ್ಷ್ ರಂತಹ ಆಲ್ ರೌಂಡರ್ ಗಳು ತಂಡದಲ್ಲಿದ್ದಾರೆ. ಕುಲದೀಪ್ ಯಾದವ್, ಮುಕೇಶ್ ಕುಮಾರ್, ಅನ್ ರಿಚ್ ನೋರ್ಟ್ಜೆ ಮುಂತಾದ ಘಟಾನುಘಟಿ ಬೌಲರ್ ಗಳ ಪಡೆಯೇ ಡೆಲ್ಲಿ ಬಳಿಯಿದೆ.