ನವದೆಹಲಿ: ಭಾರತದ ಮಿಕ್ಸೆಡ್ 10 ಮೀಟರ್ ಏರ್ ಪಿಸ್ತೂಲ್ ಸ್ಟ್ಯಾಂಡರ್ಡ್ (ಎಸ್ಎಚ್ 1 ಕೆಟಗರಿ) ತಂಡವು ಇಲ್ಲಿ ನಡೆಯುತ್ತಿರುವ ಪಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದು ಆತಿಥೇಯ ದೇಶಕ್ಕೆ ದೊರೆತ ಎರಡನೇ ಚಿನ್ನವಾಗಿದೆ.
ಕೂಟದ ನಾಲ್ಕನೇ ದಿನವಾದ ಮಂಗಳವಾರ ರುದ್ರಾಂಶ್ ಖಂಡೇಲ್ವಾಲ್ (364), ಆಕಾಶ್ (346) ಮತ್ತು ಸಂದೀಪ್ ಕುಮಾರ್ (340) ತಂಡವು 1050 ಪಾಯಿಂಟ್ ಗಳಿಸಿ ಚಿನ್ನದ ಸಾಧನೆ ಮಾಡಿತು.ದಕ್ಷಿಣ ಕೊರಿಯಾ ಈ1037) ಮತ್ತು ಚೀನಾ (1019) ತಂಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವು.
ಇದೇ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ರುದ್ರಾಂಶ್ ಅವರು ಕೊರಿಯಾದ ಕಿಮ್ ಜುಂಗ್ನಮ್ ಅವರೊಂದಿಗೆ 364 ಪಾಯಿಂಟ್ಸ್ ನೊಂದಿಗೆ ಸಮಬಲ ಸಾಧಿಸಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಕೊರಿಯಾ ಸ್ಪರ್ಧಾಳು ಚಿನ್ನ ಗೆದ್ದರು. ರುದ್ರಾಂಶ್ ಅವರಿಗೆ ಇದು ನಾಲ್ಕನೇ ಪದಕವಾಗಿದೆ.
ಸೋಮವಾರ ಮಿಕ್ಸೆಡ್ 50ಮೀ ಪಿಸ್ತೂಲ್ (ಎಸ್ಎಚ್1) ವಿಭಾಗದ ತಂಡ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲೂ ಅವರು ಬೆಳ್ಳಿ ಗೆದ್ದಿದ್ದರು. ರೈಫಲ್ ಶೂಟರ್ ಮೋನಾ ಅಗರವಾಲ್ (ಮಹಿಳೆಯರ 10 ಮೀಟರ್ ಏರ್ ರೈಫಲ್) ಈ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.