ಹಾಸನ: ಭಾನುವಾರ ದಂದು ಹಾಸನದ ಸಾಲಗಾಮೆ ರಸ್ತೆಯ ಆಕಾಶವಾಣಿ ಹಿಂಭಾಗದಲ್ಲಿರುವ ರೆಡ್ ಕ್ರಾಸ್ ಭವನದ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ, ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಬೆಂಗಳೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ಸ್ ಹಾಸನ, ಸಹಯೋಗದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆಯ ಅಂಗವಾಗಿ “ಪಾರ್ಶ್ವವಾಯು ಜಾಗೃತಿ ಅಭಿಯಾನ” ಕಾರ್ಯಕ್ರಮ ಜರುಗಿತು.
ಹಾಸನ ಕ್ಷೇತ್ರದ ಶಾಸಕರಾದ ಎಚ್.ಪಿ ಸ್ವರೂಪ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಯುತರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಶಾಸಕರು ಕಾರ್ಯಕ್ರಮ ಆಯೋಜಕರನ್ನು ಶ್ಲಾಘಿಸಿ, ಅಭಿನಂದಿಸಿದರು. ನಮ್ಮ ಜನತೆಗೆ ಇಂಥಹ ಕಾರ್ಯಕ್ರಮ ಅನಿವಾರ್ಯ.
ವೈಧ್ಯ ಲೋಕದ ದಿಗ್ಗಜರಿಂದ ಈ ಸೇವೆ ನಿರಂತರವಾಗಿರಲಿ ಜನಪರವಾದ ನಿಮ್ಮ ಸೇವೆಗಾಗಿ ನಾನು ಸದಾ ಸಿದ್ದ ಎಂದು ಉತ್ತೇಜನ ನೀಡಿದರು. ಉದ್ಘಾಟನೆಯ ನಂತರ ವೇದಿಕೆ ಗಣ್ಯರನ್ನು ಸನ್ಮಾನಿಸಲಾಯಿತು. ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯದ ಮಾಜಿ ನಿರ್ದೇಶಕರು, ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಅಧ್ಯಕ್ಷರು ಆದ ಡಾ.ಜಿ ಟಿ ಸುಭಾಷ್ ರವರು ಅಧ್ಯಕ್ಷತೆ ವಹಿಸಿದ್ದರು.
ಹಾಸನದ ಹಿಮ್ಸ್ ನಿರ್ದೇಶಕರಾದ ಡಾ. ಬಿ ಸಿ ರವಿಕುಮಾರ್ ನರ ಶಾಸ್ತ್ರಜ್ಞರಾದ ಡಾಕ್ಟರ್ ಅಭಿನಂದನ್ ಮುಖ್ಯ ಅತಿಥಿಗಳಾಗಿ ಹಾಸನದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಬ್ದುಲ್ ಬಶೀರ್ ಮತ್ತೋರ್ವ ನಿರ್ದೇಶಕರಾದ ಡಾ. ಭಾರತಿ ರಾಜಶೇಖರ್ ಅತಿಥಿಗಳಾಗಿ ಆಗಮಿಸಿ ವೇದಿಕೆ ಅಲಂಕರಿಸಿದ್ದರು. ಪಾರ್ಶ್ವವಾಯುವಿನ ಸೂಚನೆ ಮತ್ತು ಲಕ್ಷಣಗಳ ಬಗ್ಗೆ ಡಾ. ಮಧುಸೂಧನ್ ಚಿಕಿತ್ಸೆ ಮತ್ತು ದೀರ್ಘಕಾಲದ ಉಪಚಾರದ ಬಗ್ಗೆ, ಡಾ. ರಘುನಂದನ್ ನಾಡಿಗ್ ಸುದೀರ್ಘ ಮಾಹಿತಿ ನೀಡಿದರು. ಶ್ರೀ ಎನ್.ಕೆ ಮೋಹನ್ ರಾಮ್ ಮತ್ತು ಶ್ರೀ ಸತ್ಯನಾರಾಯಣ ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಸಭಾಂಗಣದಲ್ಲಿ ನೆರೆದ ಜನತೆ ನಿಶಬ್ದವಾಗಿ ಆಲಿಸಿ ಪಾರ್ಶ್ವವಾಯು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಶಾಖೆಯ ಸಭಾಪತಿಗಳಾದ ಎಚ್ ಪಿ ಮೋಹನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಬದಲಾದ ಜೀವನಶೈಲಿ ಹಾಗೂ ಆಹಾರ ಶೈಲಿಯಿಂದ ವಿಶ್ವದಲ್ಲಿ ಅತಿ ಹೆಚ್ಚು ಜನರು ಹೃದಯಘಾತದಿಂದ ಮರಣ ಹೊಂದುತ್ತಿದ್ದು, ಎರಡನೇ ಪಟ್ಟಿಯಲ್ಲಿರುವ ಪಾರ್ಶ್ವವಾಯು ಸಮಸ್ಯೆಯಿಂದ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಭಾರತದಲ್ಲಿ 1.85 ಲಕ್ಷಕ್ಕಿಂತ ಹೆಚ್ಚು ಜನರು ಪಾರ್ಶ್ವವಾಯು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು , ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರಂತೆ ಸಾವನಪ್ಪುತ್ತಿದ್ದಾರೆ ಹಾಗೂ ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಪಾರ್ಶ್ವವಾಯುವಿನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಈ ಕಾರಣಗಳಿಂದ ಹಾಸನ ಜಿಲ್ಲೆಯಲ್ಲಿ ಪಾರ್ಶ್ವವಾಯುವಿನ ಸಮಸ್ಯೆಯನ್ನು ತಡೆಗಟ್ಟಲು ಹಾಗೂ ಪಾರ್ಶ್ವವಾಯು ಸಂದರ್ಭದಲ್ಲಿ ಅದರಿಂದ ಬೇಗ ಚೇತರಿಕೆಯಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಶಾಖೆ , ಬೆಂಗಳೂರಿನ ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ಸ್ ಹಾಸನ, ಇವರ ಸಹಯೋಗದಲ್ಲಿ ಸುಮಾರು ಆರು ಜನ ವೈದ್ಯ ತಜ್ಞರು, ಹಾಸನಕ್ಕೆ ಬಂದು ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆಯಲು ಹಾಸನದ ಜನತೆ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದು ಜಾಗೃತಿಗೊಂಡರು. ಸಭಿಕರಪರವಾಗಿ ಹಾಸನದ ಮಾಜಿ ಸಂಸದ ಜವರೇಗೌಡ ಅವರು ಮಾತನಾಡಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಆಯೋಜಕರನ್ನು ಅಭಿನಂದಿಸಿದರು ಹಾಗೂ ಇಂತಹ ಕಾರ್ಯಕ್ರಮಗಳು ಆಗಿಂದಾಗ್ಗೆ ಜರುಗಿದರೆ ನಮ್ಮ ಜನ ಜಾಗೃತರಾಗಿರಲು ಅನುಕೂಲವಾಗುತ್ತದೆ ಎಂದು ಆಯೋಜಕರಲ್ಲಿ ಮನವಿ ಮಾಡಿದರು.