ಬೆಂಗಳೂರು: ಖಾಸಗಿ ಸಂಸ್ಥೆಯವರು ನೀಡಿರುವ ಎಫ್ಎಸ್ಎಲ್ ವರದಿಯನ್ನು ಗಣನೆಗೆ ತೆಗೆದುಕೊಳ್ಳಲ್ಲ ಎಂದು ಗೃಹ ಸಚಿವೆ ಜಿ. ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಫ್ಎಸ್ಎಲ್, ಗೃಹ ಇಲಾಖೆಯ ಫಾರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಧೃಡವಾಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಎಫ್ಎಸ್ಎಲ್ ವರದಿ ಘಟನೆ ನಡೆದ ಮರುದಿನವೆ ಬಂದಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಜಿ. ಪರಮೇಶ್ವರ್, ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳುತ್ತೇನೆ. ಖಾಸಗಿಯವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ? ಅವರಿಗೆ ಎನ್ಒಸಿ ಯಾರು ಕೊಟ್ಟಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇನೆ ಎಂದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಾತನಾಡಿದ ಅವರು, ಸಭೆ ಮಾಡಿ ಈಗಾಗಲೇ ಎಲ್ಲವನ್ನೂ ಹೇಳಿದ್ದೇನೆ. ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. ಎನ್ಐಎ ಈಗಾಗಲೆ ತನಿಖೆ ಆರಂಭಿಸಿದ್ದಾರೆ, ಎನ್ಎಸ್ಜಿ ಕೂಡ ತನಿಖೆ ನಡೆಸುತ್ತಿದೆ. ಇದರ ಹಿಂದೆ ಯಾರಿದ್ದಾರೆ, ವ್ಯಕ್ತಿ ಇದ್ದಾರಾ, ಸಂಘಟನೆ ಇದೆಯಾ.? ಎಲ್ಲವನ್ನೂ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿದ ಅವರು. ಮುಖ್ಯಮಂತ್ರಿಗಳೇ ಹೇಳಿದ್ದಾರೆ, ಸಂಪುಟ ಸಭೆಯಲ್ಲಿಟ್ಟು ನಿರ್ಧಾರ ಮಾಡಲಾಗುತ್ತದೆ. ವಿರೋಧ ಮಾಡುವುದು, ಪರವಾಗಿ ಮಾತಾಡುವುದುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದಿದ್ದೇ. ವರದಿ ತರಿಸಿಕೊಂಡಮೇಲೆ ಲಾಜಿಕ್ ಎಂಡ್ ಆಗಬೇಕು. ಇಲ್ಲ ರಿಜೆಕ್ಟ್ ಮಾಡಬೇಕು.
ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ದ ಎಂದರು.ಬಾಂಬ್ ಬ್ಲಾಸ್ಟ್ ತನಿಖೆಯಲ್ಲಿ ಡಿಸಿಪಿಗಳು ಜವಾಬ್ದಾರಿಯನ್ನು ನಿರ್ವಹಿಸಬೇಕು. ದಿಟ್ಟತನ ಪ್ರದರ್ಶನ ಮಾಡಿ ಫೀಲ್ಡ್ನಲ್ಲಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ವಿಶ್ವಾಸವನ್ನ ಡಿಸಿಪಿಗಳು ಗಳಿಸಬೇಕು. ಅಗತ್ಯವಾದ ಸ್ಥಳಗಳಲ್ಲಿ ಒಂದು ತಿಂಗಳೊಳಗೆ ಸಿಸಿಟಿವಿ ಅಳವಡಿಕೆ ಮಾಡಿ. ತಕ್ಷಣವೇ ಅದರ ವ್ಯತ್ಯಾಸವನ್ನು ಕಾಣಬೇಕು ಎಂದು ಜಿ ಪರಮೇಶ್ವರ್ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿ ನಿತ್ಯ ಇದರ ಬಗ್ಗೆಯೇ ಉತ್ತರಿಸಲು ಆಗುವುದಿಲ್ಲ. ನಿನ್ನೆ ನಾನು ಇದರ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದೇನೆ. ಈಗ ಮತ್ತೆ ಅದರ ಮಾತನ್ನಾಡುವುದು ಸರಿಯಲ್ಲ. ಎನ್ಐಎ ತಂಡ ತನಿಖೆಯನ್ನು ಈಗಾಗಲೇ ಶುರು ಮಾಡಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.