ಬೆಂಗಳೂರು: ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಆದೇಶವನ್ನು ಹಿಂಪಡೆಯುವ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ ಅಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇವಲ ಮೌಖಿಕ ಸೂಚನೆ ನೀಡಿ ಒಬ್ಬ ಶಾಸಕನ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದು ರಾಜಕೀಯ ಪ್ರೇರಿತ ಅಲ್ಲವೇ ಅಂತ ಪ್ರಶ್ನಿಸಿದರು.
ಆಗಿನ ಅಡ್ವೋಕೇಟ್ ಜನರಲ್ ಹೇಳಿದ್ದನ್ನೇ ಈಗಿನ ಅಡ್ವೋಕೇಟ್ ಜನರಲ್ ಸಹ ಹೇಳುತ್ತಿದ್ದಾರೆ. ತಮ್ಮ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವುದನ್ನು ಮಾತ್ರ ಮಾಡಿದೆ ಎಂದು ಗೃಹ ಸಚಿವ ಹೇಳಿದರು.
ಸಚಿವ ಸಂಪುಟದ ನಿರ್ಧಾರವನ್ನು ಕೋರ್ಟ್ ಗೆ ತಿಳಿಸುತ್ತೇವೆ ಮುಂದೇನಾಗಲಿದೆಯೋ ತಮಗೆ ಗೊತ್ತಿಲ್ಲ ಎಂದು ಹೇಳಿದ ಸಚಿವ, ಕಾನೂನು ಪ್ರಕ್ರಯೆಗೆ ದಕ್ಕೆಯಾಗಿದ್ದರೆ ಅದಕ್ಕೆ ಹಿಂದಿನ ಸರ್ಕಾರದ ದುಡುಕಿನ ನಿರ್ಧಾರ ಕಾರಣವೆಂದು ಹೇಳಿದರು.