ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿರುವ ನೇಹಾ ಹತ್ಯೆ ಲವ್ ಜಿಹಾದ್ ಅಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಎರಡು ಧರ್ಮಗಳ ನಡುವೆ ನಡೆದಿರುವ ಘಟನೆ. ನೇಹಾ ಮೊದಲಿನಿಂದಲೂ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಅವರ ಮನೆಯವರಿಗೆ ತಿಳಿದಿದೆ. ಮನೆಯಲ್ಲಿ ಆಕೆಗೆ ಬುದ್ಧಿ ಹೇಳಿ ಇದನ್ನು ಇಲ್ಲಿಗೆ ಮುಕ್ತಾಯಗೊಳಿಸುವಂತೆ ತಿಳಿಸಿದ್ದಾರೆ.
ನೇಹಾ ಕೂಡ ಮನೆಯಲ್ಲಿ ಹೇಗೆ ಹೇಳಿದ್ದಾರೋ ಹಾಗೆಯೇ ಒಪ್ಪಿಕೊಂಡು ನಡೆದುಕೊಳ್ಳಲು ಆರಂಭಿಸಿದ್ದಾಳೆ. ಆದ್ರೆ, ಈ ವಿಚಾರವನ್ನು ಸಹಿಸಿಕೊಳ್ಳಲಾಗದ ಹುಡುಗ, ನಿನ್ನೆ ಆಕೆಗೆ ಚಾಕುವಿನಿಂದ ಏಳೆಂಟು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಇದು ಲವ್ ಜಿಹಾದ್ ಅಲ್ಲ. ಚುನಾವಣಾ ಹೊಸ್ತಿಲಿನಲ್ಲಿ ಇದಕ್ಕೆ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಇದು ಸರಿಯಲ್ಲ. ನಾನು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮಾತುಕತೆ ನಡೆಸಿದ್ದೇನೆ ಎಂದು ಬೆಂಗಳೂರಿನಲ್ಲಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಆ ಯುವಕನನ್ನು ಕೂಡ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿಯವರು ಹೇಳುವ ಹಾಗೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಲ್ಲವೂ ನಮ್ಮ ಹಿಡಿತದಲ್ಲಿದೆ. ಚುನಾವಣಾ ಸಂದರ್ಭದಲ್ಲಿ ಸುಖಾಸುಮ್ಮನೆ ಬಿಜೆಪಿಯವರು ಕೋಮು ಸೌಹಾರ್ದತೆಯನ್ನು ಕದಡುವ ಕೆಲಸಕ್ಕೆ ಮುಂದಾಗುತ್ತಾರೆ ಅಸಮಾಧಾನ ಹೊರ ಹಾಕಿದ್ದಾರೆ.ರಾಜ್ಯದಲ್ಲಿ ಎಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ? ಗದಗದಲ್ಲಿ ಆಗಿರುವ ನಾಲ್ಕು ಮರ್ಡರ್ ಕುಟುಂಬಕ್ಕೆ ಸಂಬಂಧಿಸಿರುವ ಘಟನೆ ಎಂಬ ಮಾಹಿತಿ ಇದೆ.
ಇದರ ಬಗ್ಗೆ ಇನ್ನು ತನಿಖೆ ಪ್ರಗತಿಯಲ್ಲಿದೆ.ಬೆಂಗಳೂರಿನ ಡಬಲ್ ಮರ್ಡರ್, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಗಿರುವುದು. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಲೇಪಿಸುವುದು ಎಷ್ಟರಮಟ್ಟಿಗೆ ಸರಿ? ಇನ್ನು ಚುನಾವಣಾ ಹೊಸ್ತಿಲಿನಲ್ಲಿ ಇಂತಹ ಘಟನೆಗಳನ್ನು ಮಾಡಿಸುವುದು ಅವರೇ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.