ಬೆಂಗಳೂರು: ಪರಮೇಶ್ವರ್ ಸಿಎಂ ಆದರೆ ನಾನು ಅವರ ಪರ ಇದ್ದೇನೆ. ಬದಲಾವಣೆ ಅಂತ ಬಂದರೆ ಪರಮೇಶ್ವರ್ ಸಿಎಂ ಆಗಲಿ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಗೃಹ ಸಚಿವ ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಕುರ್ಚಿ ಕದನ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಕೂಲಿ ಕೇಳೋದಿದ್ದರೆ ಪರಮೇಶ್ವರ್ ೨೦೧೩ರಲ್ಲಿ ಪಕ್ಷ ಅಧಿಕಾರಕ್ಕೆ ತಂದರು. ಪರಮೇಶ್ವರ್ ಅವರದ್ದು ಹಳೆ ಕೂಲಿ, ಇವರದ್ದು ಹೊಸ ಕೂಲಿ. ಮೊದಲು ಹಳೆ ಕೂಲಿ ತೀರಿಸಬೇಕೋ ಅಥವಾ ಹೊಸ ಸಾಲ ತೀರಿಸಬೇಕೋ? ಡಿಕೆಶಿ ಬಣದಿಂದ ದೆಹಲಿ ಪರೇಡ್ ಯಾಕೆ ಅಂತ ಅವರನ್ನೇ ಕೇಳಬೇಕು. ಪರಮೇಶ್ವರ್ ಸಿಎಂ ಸ್ಥಾನ ಕೇಳೋದು ತಪ್ಪಲ್ಲ. ೨೦೧೩ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ಕೂಲಿ ಬಾಕಿ ಇದೆ. ಡಿಕೆಶಿ ಸಿಎಂ ಸ್ಥಾನದ ಡಿಮ್ಯಾಂಡ್ ಮಾಡಿದ್ರೆ ಪರಮೇಶ್ವರ್ಗೆ ಮೊದಲು ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಹೈಕಮಾಂಡ್ ಬೇಗ ಸಮಸ್ಯೆ ಇತ್ಯರ್ಥ ಮಾಡಲಿ. ಇಲ್ಲದೆ ಹೋದರೆ ಸರ್ಕಾರ ವಿಸರ್ಜನೆ ಮಾಡಿ ಡಿಕೆಶಿ ನೇತೃತ್ವದಲ್ಲಿ ಚುನಾವಣೆ ಹೋಗಲಿ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಮತ್ತೆ ಅಧಿಕಾರಕ್ಕೆ ತರೋಣ. ಯಾರಾದರೂ ನಮ್ಮಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂದರೆ ಅವರು ಹುಚ್ಚರು. ಮೆಂಟಲ್ಗಳು ಎಂದು ಡಿಕೆಶಿ ಹಾಗೂ ಟೀಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು. ಶಾಸಕರು ದೆಹಲಿಗೆ ಹೋಗಿರೋದು ಮಂತ್ರಿ ಸ್ಥಾನಕ್ಕೆ ಗಾಡ್ ಫಾದರ್ಗಳ ಮೂಲಕ ಲಾಬಿ ಮಾಡಲು. ಸಿದ್ದರಾಮಯ್ಯ ಸಿಎಂ ಆಗಿರೋದು ಬಿಡೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂದು ನನಗೆ ಅನಿಸಲ್ಲ. ಅವರೇ ಮುಂದುವರೆಯುತ್ತಾರೆ ಎಂದರು.



