ಹೊಸಕೋಟೆ: ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಬೇಕಾದ್ದು ಅತ್ಯವಶ್ಯವಾಗಿದೆ ಎಂದು ಕುದುರೆಗೆರೆಯ ಆದಿಚುಂಚನಮಠದ ಶ್ರೀ ಸಾಯಿ ಕೀರ್ತಿನಾಥ ಸ್ವಾಮೀಜಿಯವರು ಹೇಳಿದರು.
ಅವರು ಸಮೀಪದ ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ಸಾಂಸ್ಕøತಿಕ ವೇದಿಕೆಯ ರಂಗಮಂದಿರದಲ್ಲಿ ಅಭಿನವ ನೃತ್ಯ ಅಕಾಡೆಮಿ ವತಿಯಿಂದ ದೀಪ್ಶಿಕಾ ರಘುಪತಿರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ಉತ್ತಮ ಅಭಿರುಚಿಗಳನ್ನು ಬೆಳೆಸುವುದರಿಂದ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ನೀಡಲು ಸಾಧ್ಯ.
ಇದರಿಂದ ಹಿಂಸಾರಹಿತವಾದ ಶ್ರೇಷ್ಠ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದರು. ಇಂದು ಆಧುನಿಕ ತಂತ್ರಜ್ಞಾನ ಅಳವಡಿಕೆ, ಜೀವನಶೈಲಿ ಬದಲಾವಣೆಯ ಪರಿಣಾಮವಾಗಿ ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕøತಿಕ ಶ್ರದ್ಧೆಗಳು ಕುಂಠಿತಗೊಳ್ಳುತ್ತಿರುವುದು ವಿಷಾದನೀಯ. ಇವೆಲ್ಲದರ ಸವಾಲುಗಳ ನಡುವೆಯು ಅಭಿನವ ನೃತ್ಯ ಅಕಾಡೆಮಿಯಂತಹ ಸಾಂಸ್ಕøತಿಕ ಸಂಸ್ಥೆಗಳು ನಾಡಿನ ಕಲೆ, ಸಂಸ್ಕøತಿಯ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವುದು ಅಭಿನಂದನಾರ್ಹ. ಸ್ವತಃ ಸಂಗೀತ ವಿದ್ವಾಂಸರಾದ ಇವರು ಸಹ ಗುರು ಕೀರ್ತನೆಯನ್ನು ಹಾಡುವುದರೊಂದಿಗೆ ಕುಮಾರಿ ದೀಪ್ಶಿಕಾರವರ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ನ್ಯೂ ಬಾಲ್ಡ್ವಿನ್ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಕುಮಾರಿ ದೀಪ್ಶಿಕಾರವರ ಭರತನಾಟ್ಯ ರಂಗಪ್ರವೇಶದಲ್ಲಿ ನವರಸಗಳ ಪೈಕಿ ಭಕ್ತಿ ರಸ ತಮ್ಮ ವಯಸ್ಸಿಗೆ ಮೀರಿದ್ದಾಗಿದ್ದು ನೆರೆದಿದ್ದ ಜನಮನ ಗೆದ್ದಿತು. ಮೈಸೂರು ವಾಸುದೇವಚಾರ್ಯ ವಿರಚಿತ ವಸಂತ ರಾಗದ ದೇವಿಸ್ತುತಿಯೊಂದಿಗೆ ತಮ್ಮ ಪ್ರದರ್ಶನವನ್ನು ಆರಂಭಿಸಿದ ದೀಪ್ಶಿಕಾರವರು ಅತ್ಯಂತ ಆತ್ಮವಿಶ್ವಾಸದಿಂದ ನೃತ್ಯವನ್ನು ಪ್ರದರ್ಶಿಸುತ್ತಾ ಪ್ರಾರಂಭದಲ್ಲಿಯೇ ನೆರೆದಿದ್ದ ಪ್ರೇಕ್ಷಕರÀ ಮನಸೂರೆಗೊಂಡರು.
ನಂತರದಲ್ಲಿ ಯೋಗನರಸಿಂಹಾಚಾರ್ಯ ವಿರಚಿತ ಲತಾಂಗಿ ರಾಗದ ಶಿವಸ್ತುತಿಗೆ ಹೆಜ್ಜೆ ಹಾಕುತ್ತಾ ಅದ್ಭುತ ಪ್ರದರ್ಶನ ನೀಡಿದರು. ತಾನ ವರ್ಣದಲ್ಲಿ ಬೇಹಾಗ್ ರಾಗದಲ್ಲಿ ಟಿ.ಆರ್. ಸುಬ್ರಮಣ್ಯಂ ರಚನೆಗೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ವಿವಿಧ ರಸಗಳನ್ನು ಅತ್ಯಂತ ಅದ್ಭುತವಾಗಿ ಪ್ರದರ್ಶಿಸಿದರು.ಮೈಸೂರಿನ ಲಿಂಗರಾಜ ಅರಸರ ದೇವಿ ಸ್ತುತಿಗೆ ನೃತ್ಯ ಪ್ರದರ್ಶನ ನೀಡಿದ ನಂತರ ಬೃಂದಾವನ ಸಾರಂಗ ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ಅತ್ಯಂತ ಜನಪ್ರಿಯವಾದ ಶ್ರೀರಂಗಪುರ ವಿಹಾರಿ ಜಯ ಕೋದಂಡ ರಾಮಾವತಾರ ಕೃತಿಗೆ ವಿದ್ವಾನ್ ರಘುರಾಮ್ ರಾಜಗೋಪಾಲ್ ರವರ ಅದ್ಭುತ ಗಾಯನ,
ಕೆ.ಕೆ.ಬಾನುಪ್ರಕಾಶ್ರವರ ಮೃಂದಂಗ, ವಿದ್ವಾನ್ ನಿತೀಶ್ ಅಮ್ಮನ್ನಾಯರವರ ಕೊಳಲು, ವಿದ್ವಾನ್ ಗೋಪಾಕ ವೆಂಕಟರಮಣರವರ ವೀಣೆ, ವಿದ್ವಾನ್ ಜಿ.ಲಕ್ಷ್ಮೀನಾರಾಯಣರವರ ರಿದಂ ಪ್ಯಾಡ್ ಇವುಗಳಿಂದ ಕೂಡಿದ ವಾದ್ಯಗೋಷ್ಠಿಗೆ ದೀಪ್ಶಿಕಾ ನೀಡಿದ ಪ್ರದರ್ಶನ ಪ್ರೇಕ್ಷಕರನ್ನು ಒಂದು ಘಳಿಗೆ ಭಾವ ಪ್ರಪಂಚದಲ್ಲಿ ಮುಳುಗಿಸಿದ್ದಿತು. ತಿಲ್ಲಾನದಲ್ಲಿ ಮಂಗಳಂಪಲ್ಲಿ ಬಾಲಮುರಳಿಕೃಷ್ಣರವರ ಕುಂತವರಾಳಿ ರಾಗದ ರಚನೆಗೆ ನಂತರ ಮಂಗಳದಲ್ಲಿ ಪುರಂದರದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಗೆ ದೀಪ್ಶಿಕಾ ಲೀಲಾಜಾವಾಗಿ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೃತ್ಯ ಚೂಡಾಮಣಿ ವೈಜಯಂತಿ ಕಾಶಿಯವರು ಹಾಗೂ ನೃತ್ಯಾಲಯ ನೃತ್ಯಶಾಲೆಯ ಗುರು ಮಿಥುನ್ ಶ್ಯಾಮ್ ರವರು ದೀಪ್ಶಿಕಾರ ಪ್ರತಿಭೆಯನ್ನು, ಅವರನ್ನು ತರಬೇತಿಗೊಳಿಸಿ ಇಂದಿನ ಕಾರ್ಯಕ್ರಮದ ನಟುವಾಂಗಂ ವಹಿಸಿದ್ದ ವಿದುಷಿ ಎಸ್.ಕೆ. ರಚನಾ ರವರನ್ನು ಮೆಚ್ಚಿ ಮುಕ್ತ ಕಂಠದಿಂದ ಹಾರೈಸಿದರು.
2014ರಲ್ಲಿ ಪ್ರಾರಂಭಗೊಂಡ ಅಭಿನವನೃತ್ಯ ಅಕಾಡೆಮಿಯು ದೈವಿಕ ಕಲಾಪ್ರದರ್ಶನ ಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿನಿರತವಾಗಿದೆ. ಇದರ ಸಂಸ್ಥಾಪಕರಾದ ಎಸ್.ಕೆ.ರಚನಾರವರು 2015ರಲ್ಲಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡುರವರು ಆಯೋಜಿಸಿದ್ದ ಸಂಕ್ರಾಂತಿ ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿಯವರಿಂದ ಸನ್ಮಾನಿತರಾಗಿದ್ದಾರೆ.
2015ರಲ್ಲಿ ರಂಜನಿ ಕಲಾಕೇಂದ್ರ ಮತ್ತು ಶ್ರೀ ಶಂಕರ ಟಿವಿ ಯವರಿಂದ ಆಯೋಜಿಸಿದ್ದ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ ಬೃಹತ್ ಕಲಾಪ್ರಕಾರಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಬುಕ್ ಆಫ್ ರೆಕಾಡ್ರ್ಸ್ ವತಿಯಿಂದ 2024ರಲ್ಲಿ “ಪವರ್ ವುಮೆನ್ ಅವಾರ್ಡ್” ಪಡೆದುಕೊಂಡು ಕಲೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು ಬಹಳಷ್ಟು ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಕಾರ್ಯದಲ್ಲಿ ತೊಡಗಿ ಅಭಿನವ ನೃತ್ಯ ಅಕಾಡೆಮಿಯು ನಾಡಿನ ಕೆಲವೇ ತರಬೇತಿ ಶಾಲೆಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಜನಪದರು ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷರಾದ ಪಾಪಣ್ಣ ಕಾಟಂನಲ್ಲೂರ್ರವರು ಕುಮಾರಿ ದೀಪ್ಶಿಕಾರವರನ್ನು ಸನ್ಮಾನಿಸಿದರು.