ಒಲಿಂಪಿಕ್ಸ್ಗೆ ನೂರು ದಿನಗಳಷ್ಟೇ ಉಳಿದಿದ್ದು, ಫ್ರೆಂಚ್ ಅಧಿಕಾರಿಗಳು ಪ್ಯಾರಿಸ್ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದ ನೂರಾರು ವಲಸಿಗರನ್ನು ಬುಧವಾರ ತೆರವುಗೊಳಿಸಿದರು.
ಅವರಿಗೆ ಫ್ರಾನ್ಸ್ನ ಬೇರೆ ಭಾಗಗಳಿಗೆ ಹೋಗುವಂತೆ ಮನವೊಲಿಸಿ ಬಸ್ ವ್ಯವಸ್ಥೆ ಮಾಡಿಕೊಟ್ಟರು.ಒಲಿಂಪಿಕ್ಸ್ ವೇಳೆಗೆ ನಗರವನ್ನು ಅಂದಗೊಳಿಸಲು ಫ್ರಾನ್ಸ್ ರಾಜಧಾನಿಯಿಂದ ನಿರ್ವಸಿತರನ್ನು ಹೊರದಬ್ಬಲಾಗುತ್ತಿದೆ ಎಂದು ಸೇವಾಸಂಸ್ಥೆಗಳು ಇದೇ ವೇಳೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿವೆ.
ಪ್ಯಾರಿಸ್ನಲ್ಲಿ ಜುಲೈ 26 ರಿಂದ ಆಗಸ್ಟ್ 11ರವರೆಗೆ ಒಲಿಂಪಿಕ್ಸ್ ನಡೆಯಲಿದೆ. ಈ ಹಿಂದೆ ಕಚೇರಿಯಾಗಿದ್ದು, ಪಾಳುಬಿದ್ದಿದ್ದ ಕಟ್ಟಡದಲ್ಲಿ 450 ಮಂದಿ ವಲಸಿಗರು ವಾಸವಾಗಿದ್ದರು. ಅವರೆಲ್ಲರ ದಾಖಲೆಗಳನ್ನು ಸಂಗ್ರಹಿಸಿದ್ದು, ಸಾಮಾಜಿಕ ವಸತಿ ಯೋಜನೆಯಡಿ ಸೂರಿಗೆ ಅವರು ಕಾಯುತ್ತಿದ್ದರು ಎಂದು ನೆರವಿಗೆ ಬಂದಿದ್ದ ಸರ್ಕಾರೇತರ ಸಂಸ್ಥೆಗಳು ತಿಳಿಸಿವೆ.