ಇಸ್ಲಾಮಾಬಾದ್: ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮರ್ಯಾದೆ ಹೋಗುವಂತಹ ಯಡವಟ್ಟೊಂದನ್ನು ಸ್ವತಃ ತಾನೇ ಮಾಡಿಕೊಂಡಿದೆ.
ಆ ದೇಶದ ಏರ್ಲೈನ್ ಸಂಸ್ಥೆಯಾಗಿರುವ ಪಿಐಎ ಜಾಹಿರಾತು ಒಂದಕ್ಕೆ 9/11 ದಾಳಿಯ ಫೋಟೋ ಬಳಸಿ ತನ್ನ ಮುಖಕ್ಕೆ ತಾನೇ ಮಸಿಬಳಿದುಕೊಂಡಿದೆ.
ಪಿಐಎ ನೀಡಿರುವ ಜಾಹಿರಾತು ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಈಡಾಗಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಪ್ರಧಾನಿ ಪಿಐಎ ಜಾಹಿರಾತಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪ್ಯಾರಿಸ್ ಗೆ ವಿಮಾನ ಸೇವೆಗಳನ್ನು ಪುನಃ ಒದಗಿಸುತ್ತಿರುವ ವಿಷಯವನ್ನು ತಲುಪಿಸುವುದು ಪಿಐಎ ಜಾಹಿರಾತಿನ ಉದ್ದೇಶವಾಗಿತ್ತು. ಈ ಚಿತ್ರದಲ್ಲಿ ಪ್ಯಾರಿಸ್ ನ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಎಫಿಲ್ ಟವರ್ ಇದ್ದು, ಅದರೊಟ್ಟಿಗೆ 9/11 ದಾಳಿಯನ್ನು ಹೋಲುವ ವಿಮಾನದ ಚಿತ್ರವನ್ನೂ ಬಳಕೆ ಮಾಡಿ Paris, we’re coming today ಎಂಬ ಸಂದೇಶ ಬರೆಯಲಾಗಿತ್ತು.
2001 ರ ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದಿತ್ತು. ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ ನಗರ ಮತ್ತು ಪೆಂಟಗನ್ ಮೇಲಿನ ದಾಳಿಗೂ ಪಾಕಿಸ್ತಾನಕ್ಕೂ ಐತಿಹಾಸಿಕ ಸಂಬಂಧವಿದೆ. ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲ್ಪಟ್ಟ ಖಾಲಿದ್ ಶೇಖ್ ಮೊಹಮ್ಮದ್ ಅವರನ್ನು 2003 ರಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಅಲ್ ಖೈದಾದ ನಾಯಕ ಒಸಾಮಾ ಬಿನ್ ಲಾಡೆನ್ ಅವರನ್ನು 2011 ರಲ್ಲಿ ಪಾಕಿಸ್ತಾನದಲ್ಲಿ ಅಮೆರಿಕದ ಪಡೆಗಳು ಹತ್ಯೆ ಮಾಡಿದ್ದವು.
ದೇಶದ ವಿದೇಶಾಂಗ ಸಚಿವ ಇಶಾಕ್ ದಾರ್, ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಾಹೀರಾತು ಆಂತರಿಕ ವಿಮಾನಯಾನ ಅನುಮೋದನೆಗಳನ್ನು ಹೇಗೆ ಅಂಗೀಕರಿಸಿತು ಎಂಬುದರ ಕುರಿತು ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.