ಬೆಂಗಳೂರು: ತಾವು ಹಣಪಡೆದು ಕಾಮಗಾರಿನೀಡಿದ್ದೇನೆ ಎಂದು ಕೇಳಿಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಪತ್ರದ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಈಗಾಗಲೇ ಒಡೆದಿದೆ. ಈ ಹಿಂದೆಯೇ ಬಿ.ಆರ್. ಪಾಟೀಲ್ ಅವರು ಮುಖ್ಯಮಂತ್ರಿಯವರಿಗೆ ಹಲವು ಶಾಸಕರೊಂದಿಗೆ ಸೇರಿ ಪತ್ರ ಬರೆದಿದ್ದರು. ಇದರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತಾಡಿರುವ ಪಾಟೀಲ್, ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಯಾವುದೇ ತಕರಾರಿಲ್ಲ, ಕಂದಾಯ ಸಚಿವಾರಾಗಿರುವ ಕೃಷ್ಣ ಭೈರೇಗೌಡ ತನ್ನ ವಿರುದ್ಧ ನಕಾರಾತ್ಮಕ ಕಾಮೆಂಟ್ ಗಳನ್ನು ಮಾಡಿ ತಮ್ಮ ತಲೆಯ ಮೇಲೆ ಅನುಮಾನದ ಗೂಬೆ ಕೂರಿಸಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ತನಿಖೆ ನಡೆದು ತಾನು ಆರೋಪ ಮುಕ್ತಗೊಳ್ಳದ ಹೊರತು ಸದನದಲ್ಲಿ ಕಾಲಿಡಲ್ಲ ಮತ್ತು ಆರೋಪ ಸಾಬೀತಾದರೆ ರಾಜೀನಾಮೆ ಸಲ್ಲಿಸುತ್ತೇನೆಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದಾಗಿ ಪಾಟೀಲ್ ಹೇಳಿದರು.ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಈಗಾಗಲೇ ಈ ಬಗ್ಗೆ ಬಿ.ಆರ್. ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ.
ಅವರನ್ನು ಬೆಂಗಳೂರಿಗೆ ಬಂದು ಮಾಹಿತಿ ನೀಡುವಂತೆ ಹೇಳಿದ್ದೇನೆ ಎಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹ ತಾವು ಬಿ.ಆರ್. ಪಾಟೀಲ್ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದಿದ್ದಾರೆ.ಒಟ್ಟಾರೆ ಮುಖ್ಯಮಂತ್ರಿಯವರಿಗೆ ಬಿ.ಆರ್. ಪಾಟೀಲ್ ಅವರು ಬರೆದಿದ್ದಾರೆ ಎನ್ನಲಾದ ಪತ್ರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ..