ಬೆಂಗಳೂರು: ಹೊರರಾಜ್ಯ, ಹೊರದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷೆ ಮಾತನಾಡುವವರಿಗೆ ನಾವು ಕನ್ನಡ ಕಲಿಸಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ತಿಳಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು “ಕನ್ನಡ ರಾಜ್ಯೋತ್ಸವ”ದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದಿನದಿನವೂ ನಾವು ಕನ್ನಡದ ಒಂದಷ್ಟು ಪದಗಳನ್ನು ಕಳಕೊಳ್ಳುವ ಪರಿಸ್ಥಿತಿ ಇದೆ.
ಬೆಂಗಳೂರಿನ ಕನ್ನಡಿಗರು ವಿಶಾಲ ಹೃದಯಿಗಳು. ಯಾರಾದರೂ ಕನ್ನಡ ಅಲ್ಪಸ್ವಲ್ಪ ಕಲಿತು ಮಾತನಾಡುತ್ತಿದ್ದರೂ ಅವರು ಕನ್ನಡದಲ್ಲಿ ಮಾತನಾಡಲು ಅವಕಾಶ ಕೊಡದೆ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಅದನ್ನು ನಿಲ್ಲಿಸಿ ಕನ್ನಡದಲ್ಲೇ ಮಾತನಾಡಿ ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ಯಥೇಚ್ಛವಾಗಿ ಮಳೆ ಬಂದಿತ್ತು. ಈ ವರ್ಷ ಮಳೆಯ ಕೊರತೆ ಆಗಿದೆ. ಕೊರತೆಯ ಸಂದರ್ಭದಲ್ಲೂ ಕಾವೇರಿ ನದಿಯಲ್ಲಿ ನೀರಿಲ್ಲ. ನೀರಿನ ಪ್ರಮಾಣ ಅರ್ಧಕ್ಕೂ ಕಡಿಮೆಯಾಗಿದೆ. ಈ ನಡುವೆ ಸುಪ್ರೀಂ ಕೋರ್ಟಿನ ಸೂಚನೆಯಂತೆ ನಾವು 2600 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರ ಕಾವೇರಿ ನೀರು, ಕುಡಿಯುವ ನೀರಿನ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಅವರು ತಿಳಿಸಿದರು.ನಾಡಿನ ಜನತೆಗೆ 68ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ ಅವರು, ಕರ್ನಾಟಕ ಎಂದು ನಾಮಕರಣ ಮಾಡಿ ಇವತ್ತಿಗೆ 50 ವರ್ಷಗಳಾಗಿವೆ. ಇದು ಸಂತಸದ ವಿಚಾರ ಎಂದರು.
ಕರ್ನಾಟಕದ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವೆಲ್ಲರೂ ಕೂಡ ಹೋಗಿ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಬಿಜೆಪಿ ಸಂಸದರು ಈ ಸಂಬಂಧ ಈಗಾಗಲೇ ಪ್ರಲ್ಹಾದ್ ಜೋಷಿಯವರ ಬಳಿ ಮಾತನಾಡಿದ್ದೇವೆ. ಸೂಕ್ತ ಸಮಯದಲ್ಲಿ ಕೇಂದ್ರ ಸರಕಾರದ ಪ್ರಮುಖರನ್ನು ಭೇಟಿ ಮಾಡಲಿದ್ದೇವೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.
ಎಂ.ಎಲ್.ಎ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಹೆಗಡೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಜಿ.ಮಂಜುನಾಥ್, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.